ಮಂಗಳೂರು: ರಾಶಿ ರಾಶಿ ಆಧಾರ್ ಕಾರ್ಡ್‌ಗಳು ನೀರಲ್ಲಿ ತೇಲಿಬಂದ ಆಘಾತಕಾರಿ ಘಟನೆ ಮಂಗಳೂರು ವಿಧಾನಸಭಾ ಕ್ಷೇತ್ರದ ಪುದು ಗ್ರಾಮದ ಫರಂಗಿಪೇಟೆಯ ನೇತ್ರಾವತಿ ನದಿ ತೀರದಲ್ಲಿ ಬೆಳಕಿಗೆ ಬಂದಿದೆ.
ನದಿ ತೀರದಲ್ಲಿ ಎಲ್ಲೆಂದರಲ್ಲಿ ಬಿದ್ದಿದ್ದ ಆಧಾರ್ ಕಾರ್ಡ್‌ಗಳನ್ನು ಕಂಡ ಸಾರ್ವಜನಿಕರು ಬೆಚ್ಚಿಬಿದ್ದಿದ್ದು, ತಕ್ಷಣವೇ ಪಂಚಾಯತ್ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಧ್ಯಕ್ಷರು ಸಾರ್ವಜನಿಕರ ಸಹಾಯದಿಂದ ನೂರಾರು ಆಧಾರ್ ಕಾರ್ಡ್‌ಗಳನ್ನು ಸಂಗ್ರಹಿಸಿದ್ದಾರೆ.
ಈ ಘಟನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಂಚೆ ಇಲಾಖೆಯ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಹಲವರಿಗೆ ಆಧಾರ್ ಕಾರ್ಡ್‌ಗಳು ತಲುಪದೇ ಇದ್ದ ಹಿನ್ನೆಲೆ ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಮಂಗಳೂರು ಕ್ಷೇತ್ರದ ಶಾಸಕ U. T. Khader, ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದ್ದಾರೆ. ಇಷ್ಟು ಪ್ರಮಾಣದಲ್ಲಿ ಆಧಾರ್ ಕಾರ್ಡ್‌ಗಳು ನದಿ ತೀರದಲ್ಲಿ ಪತ್ತೆಯಾಗಲು ಕಾರಣವೇನು ಮತ್ತು ಇದಕ್ಕೆ ಯಾರು ಹೊಣೆ ಎಂಬುದನ್ನು ತನಿಖೆ ಮೂಲಕ ಪತ್ತೆ ಹಚ್ಚುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದೇ ವೇಳೆ Unique Identification Authority of India (ಯುಐಡಿಎಐ) ಯೋಜನಾ ವ್ಯವಸ್ಥಾಪಕರಿಗೆ ಕೂಡ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

