ಹುಬ್ಬಳ್ಳಿಯಲ್ಲಿ ನಡೆದ ‘ಮಾರ್ಕ್’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ನಟ ಕಿಚ್ಚ ಸುದೀಪ್ ನೀಡಿದ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿದ್ದ ಬೆನ್ನಲ್ಲೇ, ಅದರ ಹಿಂದಿನ ನಿಜವಾದ ಉದ್ದೇಶವನ್ನು ಸುದೀಪ್ ಅವರ ಆಪ್ತ ರಾಜು ಗೌಡ ಬಹಿರಂಗಪಡಿಸಿದ್ದಾರೆ. ದರ್ಶನ್ ಅಭಿಮಾನಿಗಳ ಆಕ್ರೋಶದ ನಡುವೆಯೇ ಈ ಸ್ಪಷ್ಟನೆ ಮಹತ್ವ ಪಡೆದುಕೊಂಡಿದೆ.
ಸುದೀಪ್ ಅವರು ವೇದಿಕೆಯಲ್ಲಿ ಮಾತನಾಡಿದ ಸಂದರ್ಭದಲ್ಲಿ ಪೈರಸಿ ವಿರುದ್ಧದ ಆತಂಕವೇ ಮುಖ್ಯ ಕಾರಣವಾಗಿತ್ತು ಎಂದು ರಾಜು ಗೌಡ ಹೇಳಿದ್ದಾರೆ. “ಈ ಬಾರಿ ಭಾರಿ ಮಟ್ಟದ ಪೈರಸಿ ಸಂಚು ರೂಪುಗೊಂಡಿದೆ ಎಂಬ ಮಾಹಿತಿ ಸುದೀಪ್ ಅವರಿಗೆ ಫೋನ್ ಮೂಲಕ ಲಭ್ಯವಾಗಿತ್ತು. ಸುದೀಪ್ ಅಭಿಮಾನಿಗಳ ಹೆಸರಿನಲ್ಲಿ ನಕಲಿ ಸಂಘಟನೆಗಳನ್ನು ರಚಿಸಿ ಅಪಪ್ರಚಾರ ನಡೆಸಲಾಗುತ್ತಿದೆ. ಅದನ್ನು ತಡೆಯುವ ಉದ್ದೇಶದಿಂದಲೇ ಅಭಿಮಾನಿಗಳಿಗೆ ಎಚ್ಚರಿಕೆ ನೀಡುವ ರೀತಿಯಲ್ಲಿ ಅವರು ಮಾತನಾಡಿದರು” ಎಂದು ವಿವರಿಸಿದ್ದಾರೆ.
‘ನಾವೆಲ್ಲರೂ ಯುದ್ಧಕ್ಕೆ ಸಿದ್ಧ’ ಎಂಬ ಸುದೀಪ್ ಹೇಳಿಕೆ ಯಾವುದೇ ಸ್ಟಾರ್ ನಟರ ವಿರುದ್ಧ ಅಲ್ಲ ಎಂದು ರಾಜು ಗೌಡ ಸ್ಪಷ್ಟಪಡಿಸಿದ್ದಾರೆ. “ಸುದ್ದಿಗಳಲ್ಲಿ ನಡೆಯುತ್ತಿರುವ ಚರ್ಚೆ ಒಂದು, ಸುದೀಪ್ ಹೇಳಿಕೆಯ ಅರ್ಥ ಮತ್ತೊಂದು. ಅವರು ಪೈರಸಿ ವಿರುದ್ಧದ ಹೋರಾಟದ ಬಗ್ಗೆ ಮಾತನಾಡಿದ್ದಾರೆ. ಯಾವುದೇ ನಟ ಅಥವಾ ಸಿನಿಮಾವನ್ನು ಗುರಿಯಾಗಿಸಿಕೊಂಡು ಮಾತನಾಡಿಲ್ಲ” ಎಂದು ಹೇಳಿದ್ದಾರೆ.
ದರ್ಶನ್ ವಿರುದ್ಧ ಸುದೀಪ್ ಮಾತನಾಡಿದ್ದಾರೆ ಎಂಬ ಆರೋಪವನ್ನು ರಾಜು ಗೌಡ ತಳ್ಳಿಹಾಕಿದ್ದಾರೆ. “ಅಂಥ ಸಂದರ್ಭವೇ ಇಲ್ಲ. ‘ಯಾರಿಗೆ ತಟ್ಟಬೇಕೋ ತಟ್ಟುತ್ತೆ’ ಎಂಬ ಮಾತು ಪೈರಸಿ ಮಾಡುವವರಿಗಾಗಿ. ‘ಪೈಲ್ವಾನ್’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಪೈರಸಿ ನಿರ್ಮಾಪಕರನ್ನು ಕಣ್ಣೀರು ಹಾಕುವ ಸ್ಥಿತಿಗೆ ತಂದುಬಿಟ್ಟಿತ್ತು. ಅದರಿಂದ ಪಾಠ ಕಲಿಯಬೇಕು ಎಂಬುದೇ ಸುದೀಪ್ ಉದ್ದೇಶ” ಎಂದು ತಿಳಿಸಿದ್ದಾರೆ.
ಇನ್ನೂ ಸುದೀಪ್ ಅಭಿಮಾನಿಗಳ ಹೆಸರಲ್ಲಿ ಅಪಪ್ರಚಾರ ನಡೆಸುವವರ ಬಗ್ಗೆ ರಾಜು ಗೌಡ ಕಿಡಿಕಾರಿದ್ದಾರೆ. “ಅಂಥವರು ಸುದೀಪ್ ಅಭಿಮಾನಿಗಳೇ ಅಲ್ಲ. ನಿಜವಾದ ಅಭಿಮಾನಿಗಳು ಸುಳ್ಳು ಸುದ್ದಿಗಳನ್ನು ಹರಡುವುದಿಲ್ಲ. ಅವರು ಮಾಸ್ ಆಗಿ ಸುದೀಪಣ್ಣನ ಜೊತೆಗೆ ನಿಂತಿರುತ್ತಾರೆ. ಇಂಥವರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ” ಎಂದು ಹೇಳಿದ್ದಾರೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ರಾಜು ಗೌಡ, “ಅವರು ಯಾರ ಹೆಸರನ್ನಾದರೂ ಸ್ಪಷ್ಟವಾಗಿ ಉಲ್ಲೇಖಿಸಿ ಮಾತನಾಡಿದ್ದರೆ ಅದಕ್ಕೆ ಉತ್ತರ ನೀಡಲಾಗುತ್ತದೆ. ಪೈರಸಿ ಎಲ್ಲ ಸ್ಟಾರ್ ನಟರಿಗೂ ಸಮಸ್ಯೆಯೇ. ಹೀಗಾಗಿ ಅನಾವಶ್ಯಕವಾಗಿ ವಿವಾದ ಸೃಷ್ಟಿಸಬಾರದು ಎಂಬುದೇ ಸುದೀಪ್ ಮಾತಿನ ಅರ್ಥ” ಎಂದು ಸ್ಪಷ್ಟಪಡಿಸಿದ್ದಾರೆ.

