ಬೆಂಗಳೂರು: ಕನ್ನಡ ಸಿನಿಮಾ ಹಾಗೂ ಕಿರುತೆರೆ ಎರಡರಲ್ಲೂ ಗುರುತಿಸಿಕೊಂಡಿದ್ದ ನಟಿ ಕಾರುಣ್ಯ ರಾಮ್ ಇದೀಗ ವೈಯಕ್ತಿಕ ಜೀವನದ ಸಂಕಷ್ಟದಿಂದ ಸುದ್ದಿಯಲ್ಲಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ಅವರ ಸಂಕಷ್ಟಕ್ಕೆ ಕಾರಣವಾಗಿರುವುದು ಯಾವುದೇ ನಿರ್ಮಾಪಕ, ನಟ ಅಥವಾ ಹೊರಗಿನ ವ್ಯಕ್ತಿ ಅಲ್ಲ, ಬದಲಾಗಿ ತಮ್ಮ ಸ್ವಂತ ತಂಗಿಯೇ ಎಂಬುದು ಬೆಳಕಿಗೆ ಬಂದಿದೆ.
ನಟಿ ಕಾರುಣ್ಯ ರಾಮ್ ಅವರು ತಮ್ಮ ಸಹೋದರಿ ಸಮೃದ್ಧಿ ರಾಮ್ ವಿರುದ್ಧ ಆರ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಮೃದ್ಧಿ ರಾಮ್ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದು, ಕೆಲವು ಧಾರಾವಾಹಿಗಳಲ್ಲೂ ಅಭಿನಯಿಸಿದ್ದರು. ಆದರೆ ನಟನೆಯಲ್ಲಿನ ನಿರೀಕ್ಷಿತ ಯಶಸ್ಸು ದೊರಕದ ಹಿನ್ನೆಲೆ ಬಳಿಕ ಅವರು ಸ್ವಂತ ಉದ್ಯಮ ಆರಂಭಿಸಿದ್ದರು.
ಕಾರುಣ್ಯ ರಾಮ್ ನೀಡಿರುವ ದೂರಿನ ಪ್ರಕಾರ, ಸಮೃದ್ಧಿ ರಾಮ್ ಅವರು ಬೆಟ್ಟಿಂಗ್ ವ್ಯಸನಕ್ಕೆ ಒಳಗಾಗಿ ಸುಮಾರು 25 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ. ಮನೆಯಲ್ಲಿದ್ದ ನಗದು ಹಣ ಹಾಗೂ ಚಿನ್ನದ ಆಭರಣಗಳನ್ನು ದುರುಪಯೋಗಪಡಿಸಿಕೊಂಡು ಬೆಟ್ಟಿಂಗ್‌ನಲ್ಲಿ ಹಣ ಹೂಡಿದ್ದು, ಬಳಿಕ ಮನೆ ಬಿಟ್ಟು ತೆರಳಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, ಬೆಟ್ಟಿಂಗ್‌ನಲ್ಲಿ ಕಳೆದುಕೊಂಡ ಹಣ ತುಂಬಿಸಲು ಸಮೃದ್ಧಿ ಖಾಸಗಿ ವ್ಯಕ್ತಿಗಳಿಂದ ಹೆಚ್ಚಿನ ಬಡ್ಡಿಗೆ ಸಾಲ ಪಡೆದಿರುವುದಾಗಿ ಆರೋಪಿಸಲಾಗಿದೆ. ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಅಡವಿಟ್ಟು ಹಣ ಪಡೆದು ಮತ್ತೆ ಬೆಟ್ಟಿಂಗ್‌ನಲ್ಲಿ ಹೂಡಿ ನಷ್ಟ ಅನುಭವಿಸಿದ್ದಾರೆ ಎನ್ನಲಾಗಿದೆ. ಹಣ ಮತ್ತು ಚಿನ್ನದ ಬಗ್ಗೆ ಮನೆಯವರು ಪ್ರಶ್ನೆ ಮಾಡಿದಾಗ, ಸಮೃದ್ಧಿ ಮನೆ ಬಿಟ್ಟು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈಗ ಸಮೃದ್ಧಿಗೆ ಸಾಲ ನೀಡಿದವರು ಮನೆ ಬಳಿ ಬಂದು ಗಲಾಟೆ ನಡೆಸುತ್ತಿರುವುದಲ್ಲದೆ, ಸಾಮಾಜಿಕ ಜಾಲತಾಣಗಳ ಮೂಲಕ ಅಶ್ಲೀಲ ಹಾಗೂ ಬೆದರಿಕೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ಕಾರುಣ್ಯ ರಾಮ್ ಆರೋಪಿಸಿದ್ದಾರೆ.
ಸದ್ಯ ಆರ್‌ಆರ್ ನಗರ ಪೊಲೀಸರು ನಟಿ ಕಾರುಣ್ಯ ರಾಮ್ ನೀಡಿರುವ ದೂರನ್ನು ದಾಖಲಿಸಿಕೊಂಡು ಪ್ರಕರಣದ ಕುರಿತು ವಿಚಾರಣೆ ಆರಂಭಿಸಿದ್ದಾರೆ.

