ಮೈಸೂರು: ಹಿಂದುಳಿದ ವರ್ಗದ ಸಿದ್ದರಾಮಯ್ಯ ಸಿಎಂ ಆಗಿದ್ದಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಎರಡನೇ ಬಾರಿ ಸಿಎಂ ಆಗಿದ್ದಕ್ಕೆ ಸಹಿಸಲು ಕೆಲವರಿಗೆ ಆಗುತ್ತಿಲ್ಲ. ಹೊಟ್ಟೆ ಕಿಚ್ಚಿನಿಂದ ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಮೈಸೂರಿನಲ್ಲಿ ಸಿದ್ದರಾಮಯ್ಯ (Siddaramaiah) ಕಿಡಿಕಾರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬಂದ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇನೆ. ನಮ್ಮ ಕಾಲದಲ್ಲೂ ತಪ್ಪುಗಳು ಆಗಿದೆ. ಆದರೆ, ಬಿಜೆಪಿ ಕಾಲದಲ್ಲೇ ಹೆಚ್ಚು ತಪ್ಪಾಗಿರುವುದು. ಅದನ್ನು ಸರಿಪಡಿಸುತ್ತೇನೆ ಎಂದರು.
ಅಲ್ಲದೇ ಪತ್ನಿಗೆ ಸೈಟ್ ಕೊಟ್ಟಿರುವ ವಿಚಾರವಾಗಿ ಪ್ರತಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಅವರು, ನಮ್ಮದು ಅಕ್ರಮವೇ ಅಲ್ಲ. ಆ ಪ್ರಕರಣವೇ ಬೇರೆ, ಈಗ ನಡೆದಿರುವ ಪ್ರಕರಣಗಳೇ ಬೇರೆ. ನನ್ನ ಪತ್ನಿಗೆ ಸೈಟ್ ನೀಡಿರುವ ವಿಚಾರ ಹಗರಣವೇ ಅಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನನ್ನ ಪತ್ನಿಗೆ ಸೈಟ್ ಕೊಟ್ಟಿದ್ದು. ಅವರು ನನ್ನನ್ನು ಕೇಳಿ ಸೈಟ್ ಕೊಟ್ಟಿದ್ದಾರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸೇನೆ ಮೇಲೆ ದಾಳಿ – ಬೆದರಿಸಿ ಅಡುಗೆ ಮಾಡುವಂತೆ ಗ್ರಾಮಸ್ಥರಿಗೆ ಒತ್ತಾಯಿಸಿದ್ದ ಉಗ್ರರು
ಪತ್ನಿಗೆ ಸೈಟ್ ಹಂಚಿಕೆಯಾದಾಗ ನಾನು ವಿರೋಧ ಪಕ್ಷದ ನಾಯಕ. ನಾನು ಈಗ ವಿಪಕ್ಷ ನಾಯಕನನ್ನು ಕೇಳಿ ಕೆಲಸ ಮಾಡುತ್ತೇನಾ? ಮುಡಾ ತಪ್ಪು ಮಾಡಿ ನಂತರ ಪರಿಹಾರದ ಸೈಟ್ ಕೊಟ್ಟಿದೆ. ಭೂಮಿ ಕಳೆದುಕೊಂಡ ನಾವು ಪರಿಹಾರ ಪಡೆಯಬೇಕೋ ಬೇಡವೋ? ಈಗಲೂ ಅವರು ಕೊಟ್ಟಿರುವ ಸೈಟ್ ಅನ್ನು ವಾಪಸ್ ಪಡೆಯಲಿ. ಲೆಕ್ಕದ ಪ್ರಕಾರ ಬಡ್ಡಿ ಸೇರಿಸಿ 62 ಕೋಟಿ ರೂಪಾಯಿ ಪಾವತಿಸಲಿ ಎಂದಿದ್ದೇನೆ. ಸೈಟ್ ಹಂಚಿಕೆ ವಿಚಾರ ಯಾವ ಹಂತದಲ್ಲೂ ಅಕ್ರಮವಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.ಇದನ್ನೂ ಓದಿ: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದ ನಿವೃತ್ತ ಎಂಜಿನಿಯರ್ ಸೇರಿದಂತೆ 13 ಅಧಿಕಾರಿಗಳಿಗೆ ಲೋಕಾ ದಾಳಿ
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಇನ್ನೂ ಅಧಿಕೃತವಾದ ಯಾವ ವರದಿ ಬಂದಿಲ್ಲ. ಮಾಧ್ಯಮದವರು ತೋರಿಸುವ ವರದಿಯ ಪ್ರತಿ ಹೇಗೆ ನಂಬಲಿ? ವರ್ಗಾವಣೆ ಆಗುವ ಹಣದ ಎಲ್ಲಾ ವಿಚಾರ ನನ್ನ ಗಮನಕ್ಕೆ ಬರಲ್ಲ. ವಾಲ್ಮೀಕಿ ಹಗರಣ ಬಗ್ಗೆ ಮೂರು ಹಂತದಲ್ಲಿ ತನಿಖೆಯಾಗುತ್ತಿದೆ. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಈಗ ಎಲ್ಲವೂ ತನಿಖಾ ಹಂತದಲ್ಲೇ ಇದೆ ಎಂದರು. ಇದನ್ನೂ ಓದಿ: ಬೆಂಗಾವಲು ಪಡೆಯಿಲ್ಲದೇ ಖಾಸಗಿ ಕಾರಲ್ಲಿ ಅಜ್ಜಯ್ಯನ ಮೊರೆ ಹೋದ ಡಿಕೆಶಿ

