ತೆಲಂಗಾಣ : ಹೈದರಾಬಾದ್ನ ಸಂಧ್ಯಾ ಚಿತ್ರಮಂದಿರದಲ್ಲಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣದಲ್ಲಿ ಖ್ಯಾತ ನಟ ಅಲ್ಲು ಅರ್ಜುನ್ ಅವರಿಗೆ ನಾಂಪಲ್ಲಿ ಕೋರ್ಟ್ ಇಂದು ಷರತ್ತುಬದ್ಧ ರೆಗ್ಯೂಲರ್ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಕಳೆದ ವರ್ಷ ಡಿ.4ರಂದು ಅಲ್ಲು ಅರ್ಜುನ್ ನಟನೆಯ ಪುಷ್ಪಾ-2 ಸಿನಿಮಾದ ಪ್ರಿಮೀಯರ್ ಶೋ ವೇಳೆ ನಡೆದಿದ್ದ ಕಾಲ್ತುಳಿತ ಘಟನೆಯಲ್ಲಿ ಓರ್ವ ರೇವತಿ ಎಂಬ ಮಹಿಳಾ ಅಭಿಮಾನಿ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಅಲ್ಲು ಅರೆಸ್ಟ್ ಆಗಿಯೂ ಒಂದೇ ದಿನದಲ್ಲಿ ಬೇಲ್ ಕೂಡ ಪಡೆದಿದ್ದರು.
ಪ್ರಕರಣ ಸಂಬಂಧ ಇಂದು ವಿಚಾರಣೆ ನಡೆಸಿರುವ ನಾಂಪಲ್ಲಿ ಕೋರ್ಟ್ ನಿಯಮಿತ ಜಾಮೀನು ಮಂಜೂರು ಮಾಡಿದ್ದು, ಅಲ್ಲು ಅರ್ಜುನ್ಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಚಿತ್ರಮಂದಿರದಲ್ಲಿ ಅಲ್ಲು ಅರ್ಜುನ್ ನೋಡಲು ಅಭಿಮಾನಿಗಳಿಂದ ನೂಕುನುಗ್ಗಲು ಉಂಟಾಗಿದ್ದಾಗ ಕಾಲ್ತುಳಿತದಲ್ಲಿ ಮಹಿಳೆ ಮೃತಪಟ್ಟಿದ್ದರು.
ವಾದ–ಪ್ರತಿವಾದಗಳನ್ನು ಆಲಿಸಿದ ನಾಂಪಲ್ಲಿಯ 2ನೇ ಹೆಚ್ಚುವರಿ ಮೆಟ್ರೊಪಾಲಿಟಿನ್ ಸೆಷನ್ ನ್ಯಾಯಾಲಯದ ನ್ಯಾಯಾದೀಶರು ನಟ ಅಲ್ಲು ಅರ್ಜುನ್ ಗೆ ಷರತ್ತು ಬದ್ಧ ನಿಯಮಿತ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ.
50,000 ರೂ ಬಾಂಡ್‌ನ ತಲಾ ಇಬ್ಬರ ಶ್ಯೂರಿಟಿಗಳನ್ನು ಒದಗಿಸಬೇಕು ಮತ್ತು ಅಲ್ಲು ಅರ್ಜುನ್ ಅವರು ಇದೇ ಭಾನುವಾರ ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು ಎಂದು ಜಡ್ಜ್ ಆದೇಶಿಸಿದ್ದಾರೆ. ಈ ಮೂಲಕ ನಟ ಅಲ್ಲು ಅರ್ಜುನ್ ಸಧ್ಯಕ್ಕೆ ಬಂಧನ ಭೀತಿಯಿಂದ ಪಾರಾಗಿದ್ದಾರೆ.