ರಾಲೇಗನ್ ಸಿದ್ಧಿ | ಡಿಸೆಂಬರ್ 13: ಲೋಕಾಯುಕ್ತ ಕಾನೂನು ಜಾರಿಗೆ ಒತ್ತಾಯಿಸಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಘೋಷಿಸಿದ್ದಾರೆ. ಇದು ತಮ್ಮ ಅಂತಿಮ ಹೋರಾಟ ಎಂದು ಹೇಳಿರುವ ಅವರು, ಸಾರ್ವಜನಿಕ ಕಲ್ಯಾಣಕ್ಕಾಗಿ ಬಲವಾದ ಲೋಕಾಯುಕ್ತ ಕಾನೂನು ಅತ್ಯಗತ್ಯವಾಗಿದೆ ಎಂದು ಒತ್ತಾಯಿಸಿದರು.
ಜನವರಿ 30ರಿಂದ ರಾಲೇಗನ್ ಸಿದ್ಧಿಯಲ್ಲಿ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸುವುದಾಗಿ ಪ್ರಕಟಿಸಿರುವ ಅಣ್ಣಾ ಹಜಾರೆ, ಮಹಾರಾಷ್ಟ್ರ ಸರ್ಕಾರವು ಹಲವು ವರ್ಷಗಳಿಂದ ಈ ಕಾನೂನು ಜಾರಿಗೆ ನಿರ್ಲಕ್ಷ ತೋರಿಸುತ್ತಿದೆ ಎಂದು ಆರೋಪಿಸಿದರು. “ಸರ್ಕಾರ ಪ್ರದರ್ಶನಕ್ಕಾಗಿ ಅಲ್ಲ, ಸಾರ್ವಜನಿಕ ಹಿತಕ್ಕಾಗಿ ಕೆಲಸ ಮಾಡಬೇಕು” ಎಂದು ಅವರು ಕಿಡಿಕಾರಿದರು.
2011ರಲ್ಲಿ ನವದೆಹಲಿಯ ಜಂತರ್ ಮಂತರ್‌ನಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕ ದೇಶದ ಗಮನ ಸೆಳೆದಿದ್ದ ಅಣ್ಣಾ ಹಜಾರೆ, 2022ರಲ್ಲಿ ಮಹಾರಾಷ್ಟ್ರದಲ್ಲಿ ಲೋಕಾಯುಕ್ತ ಕಾಯ್ದೆ ಜಾರಿಗೆ ಒತ್ತಾಯಿಸಿ ರಾಲೇಗನ್ ಸಿದ್ಧಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಕೇಂದ್ರ ಕೃಷಿ ಸಚಿವರು ಮಧ್ಯಸ್ಥಿಕೆ ವಹಿಸಿ ಉಪವಾಸ ಹಿಂಪಡೆಯುವಂತೆ ಮನವೊಲಿಸಿದ್ದರು.
ಆ ನಂತರ ಲೋಕಾಯುಕ್ತ ಕಾನೂನು ಜಾರಿಗೆ ಸಂಬಂಧಿಸಿದಂತೆ ಒಂದು ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯು ಕಾಯ್ದೆಯ ಕರಡನ್ನು ಸಿದ್ಧಪಡಿಸಿತ್ತು. ಈ ಕರಡು ಮಹಾರಾಷ್ಟ್ರ ವಿಧಾನಸಭೆಯ ಎರಡೂ ಸದನಗಳಲ್ಲಿ ಮಂಡನೆಯಾಗಿ ಅಂಗೀಕಾರ ಪಡೆದು, ಅಂತಿಮ ಒಪ್ಪಿಗೆಗಾಗಿ ರಾಷ್ಟ್ರಪತಿಗಳಿಗೆ ಕಳುಹಿಸಲಾಗಿತ್ತು. ಆದರೆ ಆ ಬಳಿಕ ಕಾಯ್ದೆ ಜಾರಿಗೆ ಬಂದಿಲ್ಲ ಎಂದು ಅಣ್ಣಾ ಹಜಾರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಯ್ದೆ ಜಾರಿಗೆ ಸಂಬಂಧಿಸಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಏಳು ಪತ್ರಗಳನ್ನು ಬರೆದಿದ್ದೇನೆ. ಆದರೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. “ಈ ಕಾನೂನು ಜಾರಿಗೆ ಯಾಕೆ ವಿಳಂಬವಾಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ” ಎಂದು ಹೇಳಿದರು.
ಜನವರಿ 30ರಂದು ಉಪವಾಸ ಆರಂಭಿಸುವ ದಿನ ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿಯಾಗಿದ್ದು, ಅದೇ ದಿನದಿಂದ ಹೋರಾಟ ಆರಂಭಿಸುವುದು ಸಾಂಕೇತಿಕ ಮಹತ್ವ ಹೊಂದಿದೆ ಎಂದು ಅಣ್ಣಾ ಹಜಾರೆ ತಿಳಿಸಿದರು. “ನನ್ನ ಜೀವನವನ್ನೆಲ್ಲ ದೇಶದ ಮತ್ತು ಸಮಾಜದ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದೇನೆ. ದೇಹದಲ್ಲಿ ಜೀವ ಇರುವವರೆಗೂ ಹೋರಾಟ ಮುಂದುವರಿಸುತ್ತೇನೆ. ಕಾನೂನು ಜಾರಿಯಾಗುವವರೆಗೂ ಹೋರಾಡುತ್ತೇನೆ, ಇಲ್ಲವಾದರೆ ಅಲ್ಲಿಯೇ ಸಾಯುತ್ತೇನೆ” ಎಂದು ಅವರು ಸ್ಪಷ್ಟಪಡಿಸಿದರು.
ಈ ದೇಶ ಕಾನೂನಿನ ಆಧಾರದಲ್ಲಿ ನಡೆಯುತ್ತಿದೆ. ಈವರೆಗೆ ನಾನು 10 ಕಾನೂನುಗಳ ರೂಪಿಕೆಗೆ ಸಹಕಾರ ನೀಡಿದ್ದೇನೆ. ಈಗ ರಾಜ್ಯಕ್ಕೆ ಬಲವಾದ ಲೋಕಾಯುಕ್ತ ಕಾನೂನು ಅಗತ್ಯವಾಗಿದೆ ಎಂದು ಅಣ್ಣಾ ಹಜಾರೆ ಹೇಳಿದರು.

