ಹುಬ್ಬಳ್ಳಿ: ಇತ್ತೀಚೆಗೆ ನಗರದಲ್ಲಿ ಸದ್ದು ಮಾಡಿದ್ದ ಲವ್ ಜಿಹಾದ್ ಪ್ರಕರಣದ ಬೆನ್ನಲ್ಲೇ ಮತ್ತೊಂದು ಗಂಭೀರ ಘಟನೆ ಬೆಳಕಿಗೆ ಬಂದಿದೆ. ಪ್ರೀತಿಸುವ ನಾಟಕವಾಡಿ ಹಿಂದೂ ಯುವತಿಯ ಮೇಲೆ ಮುಫೀಸ್ ಮಿಯಾನ್ನವರ್ ಎಂಬಾತ ಅತ್ಯಾಚಾರ ಎಸಗಿರುವುದಾಗಿ ಆರೋಪ ಕೇಳಿಬಂದಿದ್ದು, ಈ ಸಂಬಂಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾಹಿತಿಯ ಪ್ರಕಾರ, ಸುಮಾರು ಐದು ವರ್ಷಗಳ ಹಿಂದೆ ಕಾಲೇಜು ವಿದ್ಯಾರ್ಥಿನಿಯಾಗಿದ್ದ ಸಂತ್ರಸ್ತೆಗೆ, ಮತ್ತೊಂದು ಕಾಲೇಜಿನ ವಿದ್ಯಾರ್ಥಿಯಾಗಿದ್ದ ಕಮರಿಪೇಟೆಯ ಗವಿ ಓಣಿ ನಿವಾಸಿ ಮುಫೀಸ್ ಮಿಯಾನ್ನವರ್ ಪರಿಚಯ ಕಾರ್ಯಕ್ರಮವೊಂದರಲ್ಲಿ ಪರಿಚಯವಾಗಿದ್ದ. ನಂತರ ಇಬ್ಬರೂ ಸಂಪರ್ಕದಲ್ಲಿದ್ದು, ಹಲವು ಸ್ಥಳಗಳಲ್ಲಿ ಒಟ್ಟಿಗೆ ಓಡಾಡುತ್ತಿದ್ದರೆಂದು ತಿಳಿದುಬಂದಿದೆ.
ಇಬ್ಬರ ನಡುವೆ ಸ್ನೇಹ ಗಾಢವಾದ ಹಿನ್ನೆಲೆ, ಆರೋಪಿಯು ಯುವತಿಯನ್ನು ಗದಗ ರಸ್ತೆಯ ಸೇತುವೆ ಬಳಿಗೆ ಕರೆದುಕೊಂಡು ಹೋಗಿ, ಆಕೆಯ ವಿರೋಧದ ನಡುವೆಯೂ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಘಟನೆ ವೇಳೆ ವಿಡಿಯೋ ಮಾಡಿಕೊಂಡು ಅದನ್ನು ಬಳಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದನೆಂಬ ಆರೋಪವೂ ಕೇಳಿಬಂದಿದೆ.
ಮುಂದೆ 2025ರಲ್ಲಿ ಯುವತಿಯನ್ನು ಬ್ಲ್ಯಾಕ್‌ಮೇಲ್ ಮಾಡಿ ಧಾರವಾಡದಲ್ಲಿ ರಿಜಿಸ್ಟರ್ ಮದುವೆ ಮಾಡಲು ಆರೋಪಿ ಯತ್ನಿಸಿದ್ದಾನೆ. ಆದರೆ ವಿಷಯ ತಿಳಿದ ಕುಟುಂಬಸ್ಥರು ಮದುವೆಯನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕವೂ ಆರೋಪಿ ಯುವತಿಯ ಮನೆಗೆ ಆಗಾಗ ಭೇಟಿ ನೀಡುತ್ತಿದ್ದನೆಂದು ಹೇಳಲಾಗಿದೆ.
2025ರ ನವೆಂಬರ್ ಮೂರನೇ ವಾರದಲ್ಲಿ, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ದುರುಪಯೋಗ ಮಾಡಿಕೊಂಡು ಮತ್ತೆ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕುಟುಂಬದವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನೆಂದು ದೂರಿನಲ್ಲಿ ಹೇಳಲಾಗಿದೆ.
ಇತ್ತೀಚೆಗೆ ಹುಬ್ಬಳ್ಳಿಯ ಜಿಮ್ ಟ್ರೈನರ್ ವಿರುದ್ಧವೂ ಇಂತಹದೇ ಪ್ರಕರಣ ದಾಖಲಾಗಿರುವ ಬೆನ್ನಲ್ಲೇ ಈ ಘಟನೆ ಬೆಳಕಿಗೆ ಬಂದಿದ್ದು, ನಗರದಲ್ಲಿ ಆತಂಕ ಹೆಚ್ಚಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

