ಬೆಂಗಳೂರು, ಫೆಬ್ರವರಿ 20: ರಾಜ್ಯದ ಜನತೆಗೆ ಸರ್ಕಾರ ಮತ್ತೊಂದು ಶಾಕ್ ನೀಡಲು ಮುಂದಾಗಿದ್ದು, ಬೇಸಿಗೆ ಆರಂಭಕ್ಕೂ ಮುನ್ನವೇ ವಿದ್ಯುತ್ ದರ ಪರಿಷ್ಕರಣೆ ಮಾಡುವ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಈ ಹಿನ್ನೆಲೆ ವಿದ್ಯುತ್ ದರ ಏರಿಕೆಯಾಗುವುದು ಬಹುತೇಕ ನಿಶ್ಚಿತ ಎಂದು ತಿಳಿದುಬಂದಿದೆ. ಈ ಸಂಬಂಧ ಇಂದು ಮಹತ್ವದ ಸಭೆ ನಡೆಯಿತು.
ವಿದ್ಯುತ್ ದರ ಪರಿಷ್ಕರಣೆ ಕುರಿತು ಮಾಹಿತಿ ನೀಡಿದ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ್ ಅವರು, “ವಿದ್ಯುತ್ ದರ ಪರಿಷ್ಕರಣೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC)ಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಂದಿನ ಸಭೆಯಲ್ಲಿ ನಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದೇವೆ. 2025-26ನೇ ಸಾಲಿನಲ್ಲಿ ಸುಮಾರು ₹2,800 ಕೋಟಿ ರೂಪಾಯಿ ಕೊರತೆ ಉಂಟಾಗಿದೆ. ಈ ಕೊರತೆಯನ್ನು ಸರಿದೂಗಿಸಲು ದರ ಪರಿಷ್ಕರಣೆ ಅಗತ್ಯವಾಗಿದೆ. ಅಂತಿಮ ನಿರ್ಧಾರವನ್ನು ಶೀಘ್ರದಲ್ಲೇ KERC ತೆಗೆದುಕೊಳ್ಳಲಿದೆ,” ಎಂದು ತಿಳಿಸಿದ್ದಾರೆ.
ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳ (ESCOMs) ನಷ್ಟವನ್ನು ಸರಿದೂಗಿಸುವ ಉದ್ದೇಶದಿಂದ 2026ರ ಏಪ್ರಿಲ್‌ನಿಂದ ಪ್ರತಿ ಯೂನಿಟ್‌ಗೆ ₹1ರಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. 2025-26ನೇ ಸಾಲಿನಲ್ಲಿ ಗೃಹಬಳಕೆಯ ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ ₹5.80ಕ್ಕೆ ಪರಿಷ್ಕರಿಸಲಾಗಿತ್ತು. ಇದೀಗ ಹೆಚ್ಚುವರಿ ದರ ಏರಿಕೆಗೆ ಸಂಬಂಧಿಸಿದಂತೆ KERC ಸಭೆ ನಡೆಸಿದ್ದು, ಚರ್ಚೆಗಳು ನಡೆಯುತ್ತಿವೆ.
ವಿದ್ಯುತ್ ಖರೀದಿ ವೆಚ್ಚದ ಏರಿಕೆ ಮತ್ತು ಎಸ್ಕಾಂಗಳ ಆದಾಯದ ಕೊರತೆ ಹಿನ್ನೆಲೆಯಲ್ಲಿ ದರ ಏರಿಕೆ ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 30 ಪೈಸೆ ಗ್ರಾಮೀಣ ರಿಯಾಯಿತಿ ನೀಡುವ ಸಾಧ್ಯತೆ ಇದೆ.
ಇದೇ ವೇಳೆ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ) ಕೂಡ ಪ್ರತಿ ಯೂನಿಟ್‌ಗೆ 12 ಪೈಸೆ ದರ ಏರಿಕೆ ಮಾಡುವ ಪ್ರಸ್ತಾವನೆ ಸಲ್ಲಿಸಿದ್ದು, ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗುತ್ತಿದೆ. ಅಂತಿಮವಾಗಿ KERC ಕೈಗೊಳ್ಳುವ ತೀರ್ಮಾನ ರಾಜ್ಯದ ಲಕ್ಷಾಂತರ ಗ್ರಾಹಕರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

