ಶಿವಮೊಗ್ಗ: ರಾಜ್ಯದಲ್ಲಿ ಶಿಕ್ಷಕರ ಕೊರತೆಯನ್ನು ನಿವಾರಿಸಲು ಸರ್ಕಾರ ದೊಡ್ಡ ಮಟ್ಟದ ನೇಮಕಾತಿಗೆ ಮುಂದಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲೇ ಒಟ್ಟು 18,000 ಶಿಕ್ಷಕರ ನೇಮಕಾತಿ ನಡೆಸಲಾಗುವುದು ಎಂದು ಘೋಷಿಸಿದ್ದಾರೆ.
ಶಿವಮೊಗ್ಗದಲ್ಲಿ ನವೆಂಬರ್ 29 ರಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು,
“ಸರ್ಕಾರಿ ಶಾಲೆಗಳಿಗೆ 12,000 ಹಾಗೂ ಅನುದಾನಿತ ಶಾಲೆಗಳಿಗೆ 6,000 ಸೇರಿ ಒಟ್ಟು 18,000 ಶಿಕ್ಷಕರನ್ನು ಶೀಘ್ರದಲ್ಲೇ ನೇಮಕ ಮಾಡಿಕೊಳ್ಳಲಾಗುತ್ತದೆ,” ಎಂದು ತಿಳಿಸಿದರು.
ಸಚಿವರ ಮಾತುಗಳ ಪ್ರಕಾರ ರಾಜ್ಯದಲ್ಲಿ ಯಾವುದೇ ಶಿಕ್ಷಕರ ಕೊರತೆಯಾಗದಂತೆ ಇಲಾಖೆ ಕ್ರಮ ಕೈಗೊಳ್ಳಲಿದೆ. ಮುಂದಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಸ್ವಾಗತಕ್ಕೆ ಈಗಲೇ ನೇಮಕವಾಗುವ ಶಿಕ್ಷಕರು ಹಾಜರಿರಲಿದ್ದಾರೆ ಎಂದು ಅವರು ಭರವಸೆ ನೀಡಿದರು.
ಈವರೆಗೆ ಸರ್ಕಾರವು ಒಟ್ಟು 32,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವುದಾಗಿ ಮಧು ಬಂಗಾರಪ್ಪ ತಿಳಿಸಿದರು. ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಣ ಇಲಾಖೆ ಸಹಕಾರ ನೀಡಲಿದ್ದು, ಈ ನಿಟ್ಟಿನಲ್ಲಿ ಪ್ರಾಂಶುಪಾಲರು ಮತ್ತು ಉಪಪ್ರಾಂಶುಪಾಲರ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.

