ಬೆಂಗಳೂರು : ಕನ್ನಡ ರಂಗಭೂಮಿ, ಚಲನಚಿತ್ರ ಹಾಗೂ ಕಿರುತೆರೆಯಲ್ಲಿ ತನ್ನದೇ ಆದ ವಿಶಿಷ್ಟ ಗುರುತು ಮೂಡಿಸಿದ್ದ ಹಿರಿಯ ಕಲಾವಿದ ಯಶವಂತ ಸರದೇಶಪಾಂಡೆ ಇನ್ನು ನೆನಪು ಮಾತ್ರ. ಹಾಸ್ಯನಟ, ನಿರ್ದೇಶಕ, ನಾಟಕಕಾರ, ಸಂಭಾಷಣಾಕಾರ ಹಾಗೂ ರಚನೆಕಾರರಾಗಿ ತನ್ನ ಕಲೆಯ ಮೂಲಕ ಲಕ್ಷಾಂತರ ಜನರ ಮನ ಗೆದ್ದಿದ್ದ ಅವರು, ಹೃದಯಾಘಾತದಿಂದ ಅಲ್ಪಕಾಲದ ಅನಾರೋಗ್ಯದ ನಂತರ ಅಗಲಿದ್ದಾರೆ. ಅವರ ಅಗಲಿಕೆಯಿಂದ ರಂಗಭೂಮಿ ಮತ್ತು ಚಿತ್ರರಂಗ ಕಂಬನಿ ಮಿಡಿದಿದೆ. ಇವರ ಪತ್ನಿಯೂ ಖ್ಯಾತ ಕಿರುತೆರೆ ನಟಿ ಆಗಿದ್ದು, ಇಬ್ಬರೂ ಕನ್ನಡದ ರಿಯಾಲಿಟಿ ಶೋ ‘ಜೋಡಿ ನಂ. 1’ನಲ್ಲಿ ಭಾಗವಹಿಸಿ ಪ್ರೇಕ್ಷಕರ ಮನ್ನಣೆ ಗಳಿಸಿದ್ದರು.
ಬಾಲ್ಯ ಮತ್ತು ಶಿಕ್ಷಣ
ಯಶವಂತ ಸರದೇಶಪಾಂಡೆಯವರು 1965ರ ಜೂನ್ 13ರಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಹಳ್ಳಿಯಲ್ಲಿ ಜನಿಸಿದರು. ತಂದೆ ಶ್ರೀಧರರಾವ್ ಗೋಪಾಲರಾವ್ ಸರದೇಶಪಾಂಡೆ ಮತ್ತು ತಾಯಿ ಕಲ್ಪನಾದೇವಿ. ಬಾಲ್ಯದಿಂದಲೇ ನಾಟಕಗಳತ್ತ ಹೆಚ್ಚಿನ ಆಸಕ್ತಿ ಹೊಂದಿದ ಅವರು, ಹೆಗ್ಗೋಡಿನ ನಿನಾಸಂ ನಾಟಕ ಸಂಸ್ಥೆಯಿಂದ ಡಿಪ್ಲೊಮ ಪಡೆದರು. ನಂತರ ಅಮೇರಿಕದ ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ನಾಟಕ ರಚನೆ ಮತ್ತು ಚಲನಚಿತ್ರ ಸಂಭಾಷಣೆ ವಿಷಯದಲ್ಲಿ ವಿಶೇಷ ತರಬೇತಿ ಪಡೆದು, ತಮ್ಮ ಕಲೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ.
ರಂಗಭೂಮಿ ಸಾಧನೆ
ಅವರು ರಾಜ್ಯಾದ್ಯಂತ 60ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಅಂಧಯುಗ, ಇನ್‌ಸ್ಪೆಕ್ಟರ್ ಜನರಲ್, ಮಿಡ್‌ಸಮರ್ ನೈಟ್ಸ್ ಡ್ರೀಮ್, ಬಾಡಿಗೆ ಮನೆ, ಕಿತ್ತೂರು ರಾಣಿ ಚೆನ್ನಮ್ಮ, ಪುಷ್ಪರಾಣಿ, ಗಲಿವರನ ಯಾತ್ರೆ, ಬೆಪ್ಪುತಕ್ಕಡಿ ಬೋಳೇ ಶಂಕರ, ತುಂಟ ಮಕ್ಕಳ ತಂಟೆ, ಮಕ್ಕಳೆರಡೇ ಇರಲಿ, ಕುಂಟಾ ಕುಂಟ ಕುರವತ್ತಿ ಮುಂತಾದ ನಾಟಕಗಳು ಅವರ ನಿರ್ದೇಶನದ ವಿಶಿಷ್ಟ ಉದಾಹರಣೆಗಳು. ರಂಗವರ್ತುಲ ಮತ್ತು ಬೇಂದ್ರೆ ರಂಗಾವಳಿಯ ಮುಖಾಂತರ ಕವಿ ಬೇಂದ್ರೆಯವರ ಎಲ್ಲಾ ನಾಟಕಗಳನ್ನು ರಂಗಕ್ಕೆ ತಂದು ಅಭೂತಪೂರ್ವ ಯಶಸ್ಸು ಪಡೆದಿದ್ದಾರೆ.
ಸರದೇಶಪಾಂಡೆ ರಾಜ್ಯಾದ್ಯಂತ 60ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದರು. ಅಂಧಯುಗ, ಇನ್‌ಸ್ಪೆಕ್ಟರ್ ಜನರಲ್, ಮಿಡ್‌ಸಮರ್ ನೈಟ್ಸ್ ಡ್ರೀಮ್, ಬಾಡಿಗೆ ಮನೆ, ಕಿತ್ತೂರು ರಾಣಿ ಚೆನ್ನಮ್ಮ, ಪುಷ್ಪರಾಣಿ, ಗಲಿವರನ ಯಾತ್ರೆ, ತುಂಟ ಮಕ್ಕಳ ತಂಟೆ, ಕುಂಟಾ ಕುಂಟ ಕುರವತ್ತಿ ಮುಂತಾದ ನಾಟಕಗಳು ಅವರ ನಿರ್ದೇಶನದ ವಿಶಿಷ್ಟ ಕೃತಿಗಳು. ಅವರು ರಂಗವರ್ತುಲ ಮತ್ತು ಬೇಂದ್ರೆ ರಂಗಾವಳಿ ಮುಖಾಂತರ ಕವಿ ಬೇಂದ್ರೆಯವರ ಎಲ್ಲಾ ನಾಟಕಗಳನ್ನು ರಂಗಕ್ಕೆ ತಂದು ಅಭೂತಪೂರ್ವ ಯಶಸ್ಸು ಕಂಡಿದ್ದರು.
ಹಾಸ್ಯನಟನಾಗಿ ಅವರ ಹೆಸರು ಮನೆಮಾತಾಗಿದ್ದು, ಆಲ್ ದಿ ಬೆಸ್ಟ್, ರಾಶಿಚಕ್ರ, ಸಹಿ ರೀ ಸಹಿ, ದಿಲ್ ಮಾಂಗೆ ಮೋರ್ ಮುಂತಾದ ನಗೆ ನಾಟಕಗಳ ಮೂಲಕ ಪ್ರೇಕ್ಷಕರನ್ನು ನಗಿಸಿ ಮನರಂಜಿಸಿದರು. ವಿಶೇಷವಾಗಿ ರಾಶಿಚಕ್ರ ನಾಟಕದಲ್ಲಿ ಎರಡು ಗಂಟೆಗಳ ಕಾಲ ಏಕವ್ಯಕ್ತಿ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದ ಸಾಧನೆ, ಕನ್ನಡ ರಂಗಭೂಮಿಯಲ್ಲಿ ಅಪೂರ್ವ ದಾಖಲೆಯಾಗಿದೆ.
ರಂಗಭೂಮಿಯ ಹೊರತಾಗಿಯೂ ಸರದೇಶಪಾಂಡೆ ಕಿರುತೆರೆ ಮತ್ತು ಚಿತ್ರರಂಗದಲ್ಲೂ ತಮ್ಮದೇ ಆದ ಗುರುತು ಮೂಡಿಸಿದರು. ಯದ್ವಾ ತದ್ವಾ, ಬಣ್ಣದ ಬುಗುರಿ, ದಶಾವತಾರ, ಪರ್ವ, ತುಂತುರು ಧಾರಾವಾಹಿಗಳಲ್ಲಿ ನಟಿಸಿದ್ದು, ಸಿನಿಮಾ ಕ್ಷೇತ್ರದಲ್ಲಿಯೂ ತಮ್ಮ ಕಲೆ ಪ್ರದರ್ಶಿಸಿ ಅತಿಥಿ, ಮರ್ಮ, ಜೂಜಾಟ, ಸ್ಟೂಡೆಂಟ್, ಅಮೃತಧಾರೆ, ರಾಮ ಶ್ಯಾಮ ಭಾಮ ಚಿತ್ರಗಳಲ್ಲಿ ಅಭಿನಯಿಸಿದರು. ಅವರು ನಿರ್ಮಾಪಕರೂ ಆಗಿದ್ದು, ಐಡಿಯಾ ಮಾಡ್ಯಾರ ಎಂಬ ಚಲನಚಿತ್ರವನ್ನು ನಿರ್ಮಿಸಿದ್ದರು. ರಾಮಶ್ಯಾಮಭಾಮ ಚಿತ್ರಕ್ಕೆ ಸಂಭಾಷಣೆ ಬರೆದು, ಕಮಲಹಾಸನ್ ಅವರ ಪಾತ್ರಕ್ಕೆ ಉತ್ತರ ಕರ್ನಾಟಕದ ಆಡುಭಾಷೆ ಬಳಸುವ ಮೂಲಕ ಹೊಸ ಪ್ರಯೋಗವನ್ನೂ ಮಾಡಿದರು. ಅವರ ಅಗಲಿಕೆಯು ಚಿತ್ರಂಗ ಮತ್ತು ರಂಗಭೂಮಿಗೆ ತುಂಬಲಾರದ ನಷ್ಟವಾಗಿದೆ.

