‘ಅಯೋಗ್ಯ 2’ ಸಿನಿಮಾಗಿ ರಚಿತಾ ರಾಮ್ ಮತ್ತು ಸತೀಶ್ ನೀನಾಸಂ ಒಂದಾಗಿದ್ದಾರೆ. ಸೂಪರ್ ಹಿಟ್ ಅಯೋಗ್ಯ ಸಿನಿಮಾ ಮೂಲಕ ಮೋಡಿ ಮಾಡಿದ್ದ ಈ ಸೂಪರ್ ಸಕ್ಸಸ್ ಜೋಡಿ ಇದೀಗ 6 ವರ್ಷಗಳ ಬಳಿಕ ಮತ್ತೆ ಅಭಿಮಾನಿಗಳನ್ನು ರಂಜಿಸಲು ರೆಡಿಯಾಗಿದ್ದಾರೆ.
ಅಯೋಗ್ಯ-2 ಸಿನಿಮಾ ಅದ್ದೂರಿಯಾಗಿ ಸೆಟ್ಟೇರಿದೆ. ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನಡೆದ ಅದ್ದೂರಿ ಮುಹೂರ್ತ ಸಮಾರಂಭದಲ್ಲಿ ಅಯೋಗ್ಯ-2 ಚೀತ್ರೀಕರಣಕ್ಕೆ ಚಾಲನೆ ಸಿಕ್ಕಿತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅಯೋಗ್ಯ-2 ಚಿತ್ರಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದರು.
ಮುಹೂರ್ತ ಸಮಾರಂಭದಲ್ಲಿ ಇಡೀ ಸಿನಿಮಾತಂಡದ ಜೊತೆಗೆ ನೆನಪಿರಲಿ ಪ್ರೇಮ್, ನಟ ಶ್ರೇಯರ್ ಮಂಜು, ಪ್ರಮೋದ್ ಸೇರಿದಂತೆ ಅನೇಕ ಕಲಾವಿದರು ಹಾಜರಿದ್ದು ಸಿನಿಮಾತಂಡಕ್ಕೆ ಶುಭಹಾರೈಸಿದರು.
ಮಹೇಶ್ ಕುಮಾರ್ ಸಾರಥ್ಯದಲ್ಲಿ ಅಯೋಗ್ಯ-2 ಮೂಡಿ ಬರುತ್ತಿದ್ದು ಮುನೇಗೌಡ ಅವರು ತಮ್ಮ ಎಸ್ ವಿ ಸಿ ಪ್ರೊಡಕ್ಷನ್ ನಲ್ಲಿ ಬಂಡವಾಳ ಹೂಡಿದ್ದಾರೆ. ಅಯೋಗ್ಯ-2ನಲ್ಲಿ ಬಹುತೇಕ ಕಲಾವಿದರು ಹಾಗೂ ತಂತ್ರಜ್ಞರು ಮೊದಲ ಭಾಗದಲ್ಲಿ ಇದ್ದವರೇ ಮುಂದುವರೆಯುತ್ತಿರುವುದು ವಿಶೇಷ. ಹಿರಿಯ ನಟ ಸುಂದರ್ ರಾಜ್, ತಬಲ ನಾಣಿ, ಶಿವರಾಜ್ ಕೆ ಆರ್ ಪೇಟೆ ಪಾರ್ಟ್-2ನಲ್ಲೂ ಇದ್ದಾರೆ. ಈ ಬಾರಿ ಮಂಜು ಪಾವಗಡ ಕೂಡ ಅಯೋಗ್ಯ ಸಿನಿಮಾತಂಡ ಸೇರಿಕೊಂಡಿದ್ದಾರೆ. ಇನ್ನೂ ಮಾಸ್ತಿ ಅವರ ಸಂಭಾಷಣೆ, ವಿಶ್ವಜಿತ್ ರಾವ್ ಕ್ಯಾಮರಾ, ಅರ್ಜುನ್ ಜನ್ಯ ಅವರ ಸಂಗೀತ ಸಿನಿಮಾಗಿರಲಿದೆ.

ಅಯೋಗ್ಯ ಸಿನಿಮಾದ ಹಾಡುಗಳು ಕನ್ನಡ ಸಿನಿಮಾರಂಗದಲ್ಲಿಯೇ ಹೊಸ ಇತಿಹಾಸ ಬರೆದಿತ್ತು. ಈಗ ಮತ್ತಷ್ಟು ಕುತೂಹಲ ಹಾಗೂ ನಿರೀಕ್ಷೆಗಳೊಂದಿಗೆ ಅಯೋಗ್ಯ-2 ಸೆಟ್ಟೇರಿದೆ. ಮಂಡ್ಯದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ.
6 ವರ್ಷದ ಹಿಂದೆ ಬಂದಿದ್ದ ಸಿದ್ದೇಗೌಡ ಹಾಗೂ ನಂದಿನಿ ಲವ್ ಸ್ಟೋರಿಗೆ ಕನ್ನಡ ಸಿನಿಮಾ ಪ್ರೇಮಿಗಳು ಫಿದಾ ಆಗಿದ್ದರು. ಈಗ ಮತ್ತದೇ ತಂಡ ‘ಅಯೋಗ್ಯ 2’ ಸಿನಿಮಾ ಮೂಲಕ ಒಂದಾಗುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.