ಅಸುರರು ಸಿನಿಮಾ ಟೀಸರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ವಸಂತ ನಗರದಲ್ಲಿರುವ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಜರುಗಿತು. ಹುಲಿಬೇಟೆ ಸಿನಿಮಾ ಮೂಲಕ ಭೂಗತ ಲೋಕದ ಪ್ರೇಮಕಥೆ ಹೇಳಿದ್ದ ನಿರ್ದೇಶಕ ರಾಜ್ ಬಹದ್ದೂರ್ ಈಗ ದರೋಡೆ ಕಥೆ ಹೊತ್ತು ಬಂದಿದ್ದಾರೆ.
ಅಸುರರು ಚಿತ್ರಕ್ಕೆ ರಾಜ್ ಬಹದ್ದೂರ್ ಆಕ್ಷನ್ ಕಟ್ ಹೇಳುವುದರ ಜೊತೆಗೆ ಪ್ರಮುಖ ಪಾತ್ರದಲ್ಲಿಯೂ ನಟಿಸಿದ್ದಾರೆ. ಅಲ್ಲದೇ ಚಿತ್ರದ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ರಾಜ್ ಬಹದ್ದೂರ್ ಜೊತೆಯಲ್ಲಿ ರಾಹುಲ್ ಗಾಯಕವಾಡ, ತಮ್ಮಣ್ಣ ಟಿ.ಕೆ., ತಿಪ್ಪಣ್ಣ ಟಿ.ಎಸ್, ಮಲ್ಲಿಕಾರ್ಜುನ್ ಮಿಮಿಕ್ರಿ, ಸುಪ್ರಿತಾ ರಾಜ್ ತಾರಾಬಳಗದಲ್ಲಿದ್ದಾರೆ.

ರಾಜ್ ಬಹದ್ದೂರ್ ಫಿಲ್ಮಂ ಫ್ಯಾಕ್ಟರಿ ಬ್ಯಾನರ್ ನಡಿ ನಿರ್ಮಾಣವಾಗಿರುವ ಅಸುರರು ಸಿನಿಮಾಗೆ ಸುರೇಶ್ ಅರಸ್ ಸಂಕಲನ, ಸುಭಾಷ್ ಸಂಗೀತ, ನವೀನ್ ಸೂರ್ಯ ಛಾಯಾಗ್ರಹಣ ಒದಗಿಸಿದ್ದಾರೆ. ನೈಜ ಘಟನೆಯಾಧಾರಿತ ಅಸುರರು ಸಿನಿಮಾದಲ್ಲಿ ದರೋಡೆ ಕಥೆಯನ್ನು ಕಟ್ಟಿಕೊಡಲಾಗಿದೆ. ಟೀಸರ್ ಮೂಲಕ ಪ್ರಚಾರ ಕಾರ್ಯ ಪ್ರಾರಂಭಿಸಿರುವ ಚಿತ್ರತಂಡ ನವೆಂಬರ್ 1ಕ್ಕೆ ಸಿನಿಮಾವನ್ನು ತೆರೆಗೆ ತರಲಿದೆ.

