ನವದೆಹಲಿ: ದೆಹಲಿಯ ನಿಯೋಜಿತ ಮುಖ್ಯಮಂತ್ರಿ ಅತಿಶಿ ಸಿಂಗ್ ಶನಿವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ದೆಹಲಿಯ ಮೂರನೇ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಈ ಮೊದಲು ಸೆಪ್ಟೆಂಬರ್ 26-27ರ ವಿಶೇಷ ಅಧಿವೇಶನ ವೇಳೆ ಪ್ರಮಾಣ ವಚನ ಸ್ವೀಕರಿಸಲು ಚಿಂತಿಸಿತ್ತು. ಲೆಫ್ಟಿನೆಂಟ್ ಗವರ್ನರ್ ಸಲಹೆ ಮೇರೆಗೆ ಶನಿವಾರ ಪ್ರಮಾಣ ವಚನ ಸ್ವೀಕರಿಸಲು ನಿರ್ಧರಿಸಿದೆ ಎಂದು ಆಮ್ಆದ್ಮಿ ಪಕ್ಷದ ಮೂಲಗಳು ಹೇಳಿವೆ.
ಎಎಪಿ ಆರಂಭದಲ್ಲಿ ಅತಿಶಿ ಮಾತ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಬೇಕೆಂದು ಯೋಜಿಸಿತ್ತು. ಬಳಿಕ ಮಂತ್ರಿಮಂಡಲದೊಂದಿಗೆ ಪ್ರಮಾಣವಚನ ಸ್ವೀಕರಿಸಲು ನಿರ್ಧರಿಸಲಾಗಿದೆ. ಹಿಂದಿನ ಅರವಿಂದ್ ಕೇಜ್ರಿವಾಲ್ ಸರ್ಕಾರದಲ್ಲಿ ಸಚಿವರಾಗಿದ್ದ ಎಎಪಿ ನಾಯಕರಾದ ಗೋಪಾಲ್ ರಾಯ್, ಕೈಲಾಶ್ ಗೆಹ್ಲೋಟ್, ಸೌರಭ್ ಭಾರದ್ವಾಜ್ ಮತ್ತು ಇಮ್ರಾನ್ ಹುಸೇನ್ ಅವರು ಸಚಿವರಾಗಿ ಮುಂದುವರಿಯಲಿದ್ದು, ಪಕ್ಷದ ಇಬ್ಬರು ಶಾಸಕರನ್ನು ಸಹ ಹೊಸ ಕ್ಯಾಬಿನೆಟ್ಗೆ ಸೇರಿಸಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ಶಾಸಕ ಮುಖೇಶ್ ಅಹ್ಲಾವತ್ ಅವರು ಹೊಸದಾಗಿ ಅತಿಶಿ ಅವರ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. ಮುಖೇಶ್ ಅಹ್ಲಾವತ್ ದೆಹಲಿಯ ಸುಲ್ತಾನ್ಪುರ ಮಜ್ರಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಮಂತ್ರಿ ಮಂಡಲಕ್ಕೆ ಇನ್ನೊಬ್ಬರನ್ನು ಆಯ್ಕೆ ಮಾಡಬೇಕಿದ್ದು, ಈವರೆಗೂ ಈ ಹೆಸರು ಅಂತಿಮವಾಗಿಲ್ಲ.