ಬಾರಾಬಂಕಿ (ಉ.ಪ್ರ.), ಫೆ.10 : ಬಾಬ್ರಿ ಮಸೀದಿಯನ್ನು ಮತ್ತೆ ಕಟ್ಟುವ ಯಾವುದೇ ಪ್ರಯತ್ನಗಳಿಗೂ ಅವಕಾಶ ಇಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಟ್ಟುನಿಟ್ಟಾಗಿ ಹೇಳಿದ್ದಾರೆ. ಬಾರಾಬಂಕಿಯಲ್ಲಿ ಮಾತನಾಡಿದ ಅವರು, ‘ಬಾಬ್ರಿ 2.0’ ಎಂಬ ಪ್ರಸ್ತಾಪದ ಕುರಿತು ಉಂಟಾಗಿರುವ ವಿವಾದಗಳಿಗೆ ಪ್ರತಿಕ್ರಿಯಿಸಿ, “ಆ ರಚನೆಯನ್ನು ಮರುನಿರ್ಮಿಸುವ ಕನಸು ಕಾಣುವವರು ನಾಶವಾಗುತ್ತಾರೆ; ಆ ದಿನ ಎಂದಿಗೂ ಬರುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ‘ಡಬಲ್ ಎಂಜಿನ್ ಸರ್ಕಾರ’ವು ಭಾರತದ ಗರ್ವದ ಪರಂಪರೆ ಮತ್ತು ಸನಾತನ ಧರ್ಮದ ಸಂಪ್ರದಾಯಗಳನ್ನು ಗೌರವಿಸುವಲ್ಲಿ ಬದ್ಧವಾಗಿದೆ ಎಂದು ಯೋಗಿ ಆದಿತ್ಯನಾಥ್ ತಿಳಿಸಿದರು. ಅಯೋಧ್ಯೆಯ ರಾಮ ಮಂದಿರದಲ್ಲಿ ಹಾರಿಸಿರುವ ಕೇಸರಿ ಧ್ವಜವು ರಾಷ್ಟ್ರದ ಶಕ್ತಿ ಮತ್ತು ಗೌರವದ ಪ್ರತೀಕವಾಗಿದೆ ಎಂದು ಅವರು ಹೇಳಿದರು.
ಈ ಹೇಳಿಕೆಗಳು, ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಮಸೀದಿ ಸಂಬಂಧಿಸಿದಂತೆ ಅಮಾನತುಗೊಂಡ ಟಿಎಂಸಿ ಶಾಸಕ ಹುಮಾಯುನ್ ಕಬೀರ್ ನೀಡಿದ ಹೇಳಿಕೆಗಳ ಬಳಿಕ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಸರ್ಕಾರ ತನ್ನ ವಾಗ್ದಾನಗಳನ್ನು ನೆರವೇರಿಸುತ್ತಿದೆ ಎಂಬುದಕ್ಕೆ ರಾಮ ಮಂದಿರ ನಿರ್ಮಾಣವೇ ಪ್ರಮುಖ ಉದಾಹರಣೆ ಎಂದು ಪುನರುಚ್ಚರಿಸಿದರು.
ಭಾರತದ ಪರಂಪರೆ, ಅದ್ಭುತ ಸಂಪ್ರದಾಯಗಳು ಮತ್ತು ಸನಾತನ ಧರ್ಮದ ಬಗ್ಗೆ ಗೌರವವನ್ನು ಒತ್ತಿ ಹೇಳುತ್ತಾ, ಕೇಸರಿ ಧ್ವಜವು ಯಾವಾಗಲೂ ರಾಷ್ಟ್ರದ ಹೆಮ್ಮೆಯನ್ನು ಹೆಚ್ಚಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಕೇಸರಿ ಧ್ವಜ ಹಾರಿಸಿರುವುದು ಸನಾತನದ ಸಂಕೇತ ಎಂದು ಸಿಎಂ ಯೋಗಿ ಬಣ್ಣಿಸಿದ್ದಾರೆ.
ಇದೇ ವೇಳೆ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಕಠಿಣ ಸಂದೇಶ ನೀಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, “ಜನರು ನಿಯಮಗಳ ಪ್ರಕಾರ ಬದುಕಲು ಕಲಿಯಬೇಕು. ಕಾನೂನನ್ನು ಪಾಲಿಸುವವರು ಪ್ರಯೋಜನ ಪಡೆಯುತ್ತಾರೆ ಮತ್ತು ಅನುಸರಿಸದವರು ನರಕದತ್ತ ಸಾಗುತ್ತಾರೆ. ಕಾನೂನನ್ನು ಉಲ್ಲಂಘಿಸುವ ಮೂಲಕ ಸ್ವರ್ಗವನ್ನು ತಲುಪಬಹುದು ಎಂದು ನಂಬುವವರ ಕನಸುಗಳು ಎಂದಿಗೂ ನನಸಾಗುವುದಿಲ್ಲ” ಎಂದು ಹೇಳಿದರು.

