ನವದೆಹಲಿ, ಜನವರಿ 12: ಹದಿನಾರು ಉಪಗ್ರಹಗಳನ್ನು ಹೊತ್ತಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯ ಪಿಎಸ್‌ಎಲ್‌ವಿ–ಸಿ62 ರಾಕೆಟ್ ಉಡಾವಣೆ ವಿಫಲಗೊಂಡಿದೆ. ಉಡಾವಣೆಯ ವೇಳೆ ತಾಂತ್ರಿಕ ವೈಫಲ್ಯ ಕಾಣಿಸಿಕೊಂಡ ಪರಿಣಾಮ ರಾಕೆಟ್ ಗುರಿ ತಪ್ಪಿದ್ದು, ಅದರೊಂದಿಗೆ ಭೂ ವೀಕ್ಷಣಾ ಉಪಗ್ರಹ ಇಒಎಸ್–ಎನ್1 ಸೇರಿದಂತೆ ಒಟ್ಟು 16 ಸೆಟಿಲೈಟ್‌ಗಳು ನಾಶಗೊಂಡಿವೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್‌ನಿಂದ ಬೆಳಗ್ಗೆ 10.18ಕ್ಕೆ ಪಿಎಸ್‌ಎಲ್‌ವಿ–ಸಿ62 ರಾಕೆಟ್ ಉಡಾವಣೆಗೊಂಡಿತ್ತು. ಇಒಎಸ್–ಎನ್1 ಸೇರಿ 15 ಉಪಗ್ರಹಗಳನ್ನು ಸೂರ್ಯ ಸಂಬದ್ಧ ಕಕ್ಷೆಗೆ (Sun Synchronous Orbit) ತಲುಪಿಸುವುದು ಮಿಷನ್‌ನ ಮುಖ್ಯ ಗುರಿಯಾಗಿತ್ತು. ಜೊತೆಗೆ ‘ಕೆಐಡಿ’ ಎಂಬ ಕ್ಯಾಪ್ಸೂಲ್ ಅನ್ನು ಭೂಮಿಗೆ ಸುರಕ್ಷಿತವಾಗಿ ಮರಳಿ ತರುವ ಯೋಜನೆಯೂ ಇತ್ತು.
‘ಕೆಐಡಿ’ (Kestrel Initial Technology Demonstrator) ಕ್ಯಾಪ್ಸೂಲ್ ಅನ್ನು ಸ್ಪೇನ್‌ನ ಕಂಪನಿಯೊಂದು ಅಭಿವೃದ್ಧಿಪಡಿಸಿದ್ದು, ಇದು 25 ಕಿಲೋಗ್ರಾಂ ತೂಕದ ಕ್ಯಾಪ್ಸೂಲ್ ಆಗಿದೆ. ಭೂಮಿಗೆ ಮರುಪ್ರವೇಶ ತಂತ್ರಜ್ಞಾನ ಪರೀಕ್ಷೆಯ ಉದ್ದೇಶದಿಂದ ಇದನ್ನು ರೂಪಿಸಲಾಗಿತ್ತು. ಮಿಷನ್‌ನ ಪ್ರಮುಖ ಉಪಗ್ರಹ ಇಒಎಸ್–ಎನ್1 ಅನ್ನು ಬ್ರಿಟನ್ ಮತ್ತು ಥಾಯ್ಲೆಂಡ್ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಇವುಗಳ ಜೊತೆಗೆ ವಿವಿಧ ದೇಶಗಳ ಒಟ್ಟು 16 ಉಪಗ್ರಹಗಳು ಈ ಮಿಷನ್‌ನಲ್ಲಿ ಸೇರಿದ್ದವು.
ರಾಕೆಟ್ ಉಡಾವಣೆಯ ವೇಳೆ ಸಂಭವಿಸುವ ವೈಫಲ್ಯಕ್ಕೆ ಇಸ್ರೋ ಅಥವಾ ರಾಕೆಟ್ ತಯಾರಕರು ಹೊಣೆಗಾರರಾಗುವುದಿಲ್ಲ ಎಂಬ ನಿಯಮವಿದೆ. ರಸ್ತೆ ಅಪಘಾತದಲ್ಲಿ ಪ್ರಯಾಣಿಕರಿಗೆ ಪರಿಹಾರ ನೀಡುವ ಹೊಣೆ ಬಸ್ ಮಾಲೀಕರ ಮೇಲಾಗಿರದಂತೆ, ರಾಕೆಟ್ ವೈಫಲ್ಯದಿಂದ ಉಪಗ್ರಹ ನಾಶವಾದರೆ ಇಸ್ರೋ ಪರಿಹಾರ ನೀಡಬೇಕೆಂಬ ಕಡ್ಡಾಯವಿಲ್ಲ. ಉಪಗ್ರಹ ತಯಾರಕರು ಬಯಸಿದರೆ ವಿಮೆ ಮಾಡಿಸಿಕೊಳ್ಳುವ ಅವಕಾಶ ಇರುತ್ತದೆ. ವಿಮೆ ಮಾಡಿಸಿರುವ ಕಂಪನಿಗಳಿಗೆ ಮಾತ್ರ ಪರಿಹಾರ ದೊರಕುವ ಸಾಧ್ಯತೆ ಇದೆ.
ಈ ಮಿಷನ್‌ನಲ್ಲಿ ಬ್ರೆಜಿಲ್, ನೇಪಾಳ ಸೇರಿದಂತೆ ಹಲವು ದೇಶಗಳ ಉಪಗ್ರಹಗಳೂ ಸೇರಿದ್ದವು. ಆಯಾ ದೇಶಗಳ ಕಂಪನಿಗಳು ವಿಮೆ ಮಾಡಿಸಿರುವ ಸಾಧ್ಯತೆ ಇದೆ. ಆದರೆ ಇಸ್ರೋ ಅಥವಾ ಭಾರತ ಸರ್ಕಾರದಿಂದ ಯಾವುದೇ ನೇರ ಪರಿಹಾರ ನೀಡಲಾಗುವುದಿಲ್ಲ ಎಂದು ತಿಳಿದುಬಂದಿದೆ.
ಇಸ್ರೋ ಇದುವರೆಗೆ 64 ಬಾರಿ ಪಿಎಸ್‌ಎಲ್‌ವಿ ರಾಕೆಟ್ ಅನ್ನು ಉಡಾವಣೆ ಮಾಡಿದ್ದು, ಇದರಲ್ಲಿ ಐದು ಬಾರಿ ವೈಫಲ್ಯ ಎದುರಾಗಿದೆ. 2025ರಲ್ಲಿಯೂ ಪಿಎಸ್‌ಎಲ್‌ವಿ ಮಿಷನ್ ವಿಫಲವಾಗಿತ್ತು. ಕಳೆದ ಒಂದು ವರ್ಷದಲ್ಲಿ ಸತತ ಎರಡು ಬಾರಿ ಪಿಎಸ್‌ಎಲ್‌ವಿ ವೈಫಲ್ಯ ಕಂಡುಬಂದಿದ್ದರೂ, ಒಟ್ಟು ಸಾಧನೆಯಲ್ಲಿ ಇದು ದೊಡ್ಡ ಹಿನ್ನಡೆಯಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿಶ್ವದ ಅನೇಕ ಬಾಹ್ಯಾಕಾಶ ಸಂಸ್ಥೆಗಳಂತೆ, ಇಲಾನ್ ಮಸ್ಕ್ ಅವರ ಸಂಸ್ಥೆಯ ರಾಕೆಟ್‌ಗಳೂ ಹಲವು ಬಾರಿ ವಿಫಲವಾಗಿರುವ ಉದಾಹರಣೆಗಳಿವೆ.
ರಾಕೆಟ್ ಉಡಾವಣೆ ವಿಫಲವಾದ ಬಳಿಕ ಅದರಲ್ಲಿದ್ದ ಹೆಚ್ಚಿನ ಉಪಗ್ರಹಗಳು ಭೂಮಿಯ ವಾತಾವರಣಕ್ಕೆ ಪ್ರವೇಶಿಸುವ ವೇಳೆ ಸುಟ್ಟು ಹೋಗುವ ಸಾಧ್ಯತೆ ಇದೆ. ಕೆಲವು ಉಪಗ್ರಹ ಅವಶೇಷಗಳು ಕೆಲಕಾಲ ಬಾಹ್ಯಾಕಾಶ ತ್ಯಾಜ್ಯಗಳಾಗಿ ಉಳಿಯಬಹುದು. ರಾಕೆಟ್‌ಗಳನ್ನು ಸಾಮಾನ್ಯವಾಗಿ ಸಮುದ್ರದ ದಿಕ್ಕಿನಲ್ಲಿ ಉಡಾವಣೆ ಮಾಡುವುದರಿಂದ ಅವುಗಳ ಅವಶೇಷಗಳು ಸಮುದ್ರಕ್ಕೆ ಬಿದ್ದು ನಾಶವಾಗುತ್ತವೆ.

