ಬೆಂಗಳೂರು, ಫೆ.23: ರಾಜ್ಯದಲ್ಲಿ ಶಾಲಾ ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚುತ್ತಿರುವ ಹಿನ್ನೆಲೆ 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧಿಸುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶನಿವಾರ ನಡೆದ ರಾಜ್ಯದ ವಿಶ್ವವಿದ್ಯಾಲಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯದ ಕುರಿತು ಚರ್ಚೆ ನಡೆಸಲಾಗಿದ್ದು, ಬಹುತೇಕ ಕುಲಪತಿಗಳು ಸರ್ಕಾರದ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಉನ್ನತ ಶಿಕ್ಷಣ ಪರಿಷತ್‌ನಲ್ಲಿ ಇಡೀ ದಿನ ನಡೆದ ಕುಲಪತಿಗಳ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, ವಿದೇಶಗಳಲ್ಲಿಯೂ 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಬಳಕೆ ನಿರ್ಬಂಧಿಸುವ ಕ್ರಮ ಜಾರಿಯಲ್ಲಿದೆ ಎಂದು ಹೇಳಿದರು.
ರಾಜ್ಯದಲ್ಲೂ ಅನೇಕ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿರುವುದರಿಂದ ಅವರು ಪಾಠಭ್ಯಾಸ, ವೈಚಾರಿಕತೆ ಹಾಗೂ ವೈಜ್ಞಾನಿಕ ಮನೋಭಾವದಿಂದ ದೂರವಾಗುತ್ತಿರುವುದು ಗಮನಕ್ಕೆ ಬಂದಿದೆ. ಮೌಲ್ಯಾಧಾರಿತ ಶಿಕ್ಷಣದಿಂದ ವಂಚಿತರಾಗುತ್ತಿರುವ ಪರಿಸ್ಥಿತಿ ಉಂಟಾಗುತ್ತಿರುವುದರಿಂದ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲು ತಯಾರಾಗಿದೆ ಎಂದು ಸ್ಪಷ್ಟಪಡಿಸಿದರು.
ವಿಶ್ವವಿದ್ಯಾಲಯಗಳು ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಬೇಕಾಗಿದೆ. ವಿದ್ಯಾರ್ಥಿಗಳನ್ನು ವಿಶ್ವಪ್ರಜೆಯನ್ನಾಗಿಸಲು ಅಗತ್ಯವಾದ ವಾತಾವರಣವನ್ನು ಸೃಷ್ಟಿಸಬೇಕು ಎಂದು ಅವರು ಸಲಹೆ ನೀಡಿದರು.
ಜಾತಿ, ಮತ, ಧರ್ಮ ಮೀರಿ ವೈಜ್ಞಾನಿಕ ಚಿಂತನೆ ಹಾಗೂ ವೈಚಾರಿಕ ಮನೋಭಾವವನ್ನು ಬೆಳೆಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ. ಆದರೆ ಕೆಲವೆಡೆ ವಿಶ್ವವಿದ್ಯಾಲಯಗಳು ಜಾತಿ ಆಧಾರಿತ ಚಟುವಟಿಕೆಗಳ ಕೇಂದ್ರಗಳಾಗಿ ಮಾರ್ಪಡುತ್ತಿರುವುದು ವಿಷಾದನೀಯ. ಯುವಜನತೆಯನ್ನು ಈ ಸಂಕೋಲೆಯಿಂದ ಹೊರತರುವ ನಿಟ್ಟಿನಲ್ಲಿ ಸಮಗ್ರ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

