Booker Prize : ಕನ್ನಡ ಸಾಹಿತ್ಯಕ್ಕೆ ವಿಶ್ವ ಮಟ್ಟದ ಪ್ರಶಸ್ತಿ ಗೌರವ ಲಭ್ಯವಾಗಿದೆ. ಪ್ರತಿಷ್ಠಿತ ಬೂಕರ್ ಪ್ರಶಸ್ತಿಯನ್ನು ಕನ್ನಡದ ಕೃತಿ ತನ್ನದಾಗಿಸಿಕೊಂಡಿದೆ. ಹಾಸನದ ಖ್ಯಾತ ಸಾಹಿತಿ ಬಾನು ಮುಷ್ತಾಕ್‌ರ ಕಥಾ ಸಂಕಲನ ‘ ಹಾರ್ಟ್ ಲ್ಯಾಂಪ್’ ಕೃತಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಸಿಕ್ಕಿದೆ. ಸಾಹಿತಿ ಬಾನು ಮುಷ್ತಾಕ್ ಅವರ ಹಾರ್ಟ್ ಲ್ಯಾಂಪ್ ಕಥಾ ಸಂಕಲನ ಇಂಗ್ಲಿಷ್‌ಗೆ ಅನುವಾದಗೊಂಡಿತ್ತು. ಹಸೀನಾ ಮತ್ತು ಇತರೆ ಕಥೆಗಳು ಕಥಾ ಸಂಕಲದಿಂದ ಆಯ್ದ ಕಥೆಗಳನ್ನು ಹಾರ್ಟ್ ಲ್ಯಾಂಪ್ ಒಳಗೊಂಡಿದೆ. ಈ ಕೃತಿಯನ್ನು ಕನ್ನಡದಿಂದ ಇಂಗ್ಲಿಷ್‌ಗೆ ಲೇಖಕಿ ದೀಪಾ ಬಸ್ತಿ ಅನುವಾದ ಮಾಡಿದ್ದರು.
1990 ಮತ್ತು 2023ರ ನಡುವೆ ಪ್ರಕಟಗೊಂಡ 12 ಕತೆಗಳನ್ನೊಳಗೊಂಡ ಈ ಸಂಕಲನವನ್ನು ದೀಪಾ ಭಸ್ತಿ ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದರು. ಮುಸ್ಲಿಂ ಸಮುದಾಯದ ಬಾಲಕಿಯರು ಹಾಗೂ ಹೆಣ್ಣುಮಕ್ಕಳ ದೈನಂದಿನ ಬದುಕನ್ನು ಆಧಾರಿಸಿ ಈ ಕಥೆಯನ್ನು ಬರೆಯಲಾಗಿತ್ತು.
ಹಾರ್ಟ್ ಲ್ಯಾಂಪ್ ಕೃತಿಯು ದಕ್ಷಿಣ ಭಾರತದ ಪಿತೃಪ್ರಧಾನ ಸಮುದಾಯಗಳಲ್ಲಿ ಮಹಿಳೆಯರ ಜೀವನದ ಕಥೆಗಳನ್ನು ಹೊಂದಿದೆ. ಈ ಪುಸ್ತಕವನ್ನು ತೀರ್ಪುಗಾರರ ಅಧ್ಯಕ್ಷರಾದ ಮ್ಯಾಕ್ಸ್ ಪೋರ್ಟರ್ ಅವರು ಸುಂದರವಾದ, ಜೀವನವನ್ನು ದೃಢೀಕರಿಸುವ ಕಥೆಗಳು. ಓದುಗರಿಗೆ ಇದು ಹೊಸದೊಂದು ಅನುಭವ ನೀಡುತ್ತದೆ ಎಂದಿದ್ದಾರೆ.
ಬಾನು ಮುಷ್ತಾಕ್ ಅವರು ಬರೆದ ಹಾರ್ಟ್ ಲ್ಯಾಂಪ್ ಕೃತಿಯನ್ನು ಇಂಗ್ಲೀಷ್ಗೆ ಟ್ರಾನ್ಸ್ಲೇಟ್ ಮಾಡಿದವರು ಮಡಿಕೇರಿ ಮೂಲದ ಅನುವಾದಕಿ ದೀಪಾ ಬಸ್ತಿ ಆಗಿದ್ದಾರೆ. ಲಂಡನ್ನಲ್ಲಿ ಪ್ರಶಸ್ತಿ ಪಡೆಯುವಾಗ ದೀಪಾ ಬಸ್ತಿ ಕೂಡ ಜೊತೆಯಲ್ಲಿದ್ದರು. ಮೇ 21 ರಂದು ಈ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿತ್ತು. ಇನ್ನು ಈ ಪ್ರಶಸ್ತಿಯು ಒಟ್ಟು 50,000 ಪೌಂಡ್ (57.28 ಲಕ್ಷ ರೂಪಾಯಿ ) ಹೊಂದಿರುತ್ತದೆ.

