BBK12: ಕರಾವಳಿ ಮೂಲದ ಸ್ಪರ್ಧಿ ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ತಮ್ಮ ಅದ್ಭುತ ಆಟದ ಮೂಲಕ ಪ್ರೇಕ್ಷಕರ ಮನ ಸೆಳೆದಿದ್ದಾರೆ. ಅವರ ಸಿಹಿ ಮಾತುಗಳು, ಕನ್ನಡ ಮಾತನಾಡುವ ಕ್ಯೂಟ್ ಪ್ರಯತ್ನಗಳು ವೀಕ್ಷಕರ ಗಮನ ಸೆಳೆದಿದ್ದು, ಈ ವಾರ ಮನೆಯೊಳಗಿನ ಟಾಸ್ಕ್‌ಗಳಲ್ಲಿ ತೋರಿದ ಪ್ರದರ್ಶನ ಇನ್ನಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.
ಕಳೆದ ವಾರ ಗಿಲ್ಲಿ ಅವರ ಮಾತುಗಳಿಗೆ ತಕ್ಕಂತೆ ನಡೆದುಕೊಂಡ ಕಾರಣ ರಕ್ಷಿತಾ ಅವರ ಆಟ ಕುಸಿದಿತ್ತು. ಈ ಬಗ್ಗೆ ಕಿಚ್ಚ ಸುದೀಪ್ ವೀಕೆಂಡ್ ಕಾ ವಾರನಲ್ಲಿ ಕ್ಲಾಸ್ ತೆಗೆದುಕೊಂಡಿದ್ದರು. ಆದರೆ ಸುದೀಪ್ ನೀಡಿದ ಸಲಹೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ ರಕ್ಷಿತಾ, ಈ ವಾರ ತನ್ನದೇ ಶೈಲಿಯಲ್ಲಿ ಎಲ್ಲಾ ಟಾಸ್ಕ್‌ಗಳಲ್ಲಿ ಮಿಂಚಿ ಮಾನವೀಯತೆಯನ್ನೂ ಪ್ರದರ್ಶಿಸಿದರು. ಈ ಕಾರಣಗಳಿಗೆ ಕಿಚ್ಚ ಸುದೀಪ್ ಅವರಿಂದ ರಕ್ಷಿತಾಗೆ ವಿಶೇಷ ಚಪ್ಪಾಳೆ ಲಭಿಸಿದೆ.
ಕಳೆದ ವಾರ ನಡೆದ ಟಾಸ್ಕ್‌ನಲ್ಲಿ ರಕ್ಷಿತಾ ಮತ್ತು ಗಿಲ್ಲಿ ಬೇರೆ ಬೇರೆ ತಂಡಗಳಲ್ಲಿ ಇದ್ದರು. ರಕ್ಷಿತಾ ತಂಡವು ಪಂದ್ಯವನ್ನು ಗೆದ್ದ ನಂತರ, ಅವರ ತಂಡದ ಒಬ್ಬ ಸದಸ್ಯರನ್ನು ನಾಮನಿರ್ದೇಶನದಿಂದ ರಕ್ಷಿಸುವ ಹೊಣೆಗಾರಿಕೆ ಬಂದಿತ್ತು. ಈ ನಿರ್ಧಾರವನ್ನು ಸರ್ವಾನುಮತದಿಂದ ತೆಗೆದುಕೊಳ್ಳಬೇಕಾಗಿತ್ತು. ಚರ್ಚೆಗೆ ಮುನ್ನ, ಗಿಲ್ಲಿ ರಕ್ಷಿತಾಗೆ “ನಿನ್ನ ನಿರ್ಧಾರವನ್ನು ಬಿಡಬಾರದು” ಎಂದು ಸಲಹೆ ನೀಡಿದ್ದನ್ನು ಸುದೀಪ್ ಪ್ರಶ್ನಿಸಿದ್ದರು.
ಸ್ವತಃ ನೇರ ಮಾತು, ನೇರ ನುಡಿಯಿಂದ ಎಲ್ಲರಿಗೂ ಇಷ್ಟವಾಗಿದ್ದ ರಕ್ಷಿತಾ, ಕಳೆದ ವಾರ ಮಾತ್ರ ಗಿಲ್ಲಿಯ ಮಾತುಗಳಿಗೆ ತಕ್ಕಂತೆ ನಡೆದುಕೊಂಡಿದ್ದರು. ಇದನ್ನು ಗಮನಿಸಿದ ಸುದೀಪ್, ವೀಕೆಂಡ್‌ನಲ್ಲಿ ಅವರಿಗೆ ಸೂಚನೆ ನೀಡಿದ್ದರು. ಸುದೀಪ್ ಅವರ ಸಲಹೆಯನ್ನು ಮನಗಂಡ ರಕ್ಷಿತಾ, ಈ ವಾರ ಮತ್ತೊಮ್ಮೆ ತಮ್ಮ ಶೈಲಿಯಲ್ಲಿ ಮಿಂಚಿ ಮನೆಯೊಳಗೆ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.

