ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಆಸ್ತಿ ಮರುವಶ ಮಾಡಿಕೊಳ್ಳಲು ಇಂದು ನಡೆಸಿದ ಕಾರ್ಯಾಚರಣೆಯಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 19 ಎಕರೆ ಆಸ್ತಿಯನ್ನು ವಶಪಡಿಸಿಕೊಂಡಿದೆ.
ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿ, ಮಾಚೋಹಳ್ಳಿ ಗ್ರಾಮದಲ್ಲಿ 16 ಎಕರೆ, ಕನ್ನಲ್ಲಿ ಗ್ರಾಮದಲ್ಲಿ 2 ಎಕರೆ ಮತ್ತು ಕೆಂಚನಪುರ ಗ್ರಾಮದಲ್ಲಿ 1 ಎಕರೆ ಪ್ರದೇಶವನ್ನು ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕಾಗಿ ಪ್ರಾಧಿಕಾರವು ಸ್ವಾಧೀನಪಡಿಸಿಕೊಳ್ಳಲಾಗಿತ್ತು.
ಸದರಿ ಪ್ರದೇಶದಲ್ಲಿ ಅನಧಿಕೃತ ನಿರ್ಮಾಣವನ್ನು ತೆರವುಗೊಳಿಸಿ ಒಟ್ಟಾರೆ 19 ಎಕರೆ ಪ್ರದೇಶವನ್ನು ಪ್ರಾಧಿಕಾರವು ತನ್ನ ವಶಕ್ಕೆ ತೆಗೆದುಕೊಂಡಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಎಂ.ಎ.ಆರ್. ರಸ್ತೆಯು ಒಟ್ಟು 10.3 ಕಿ.ಮೀ. ಉದ್ದವಿದ್ದು, ಅದರಲ್ಲಿ 8 ಕಿ.ಮೀ. ರಸ್ತೆಯು ಪೂರ್ಣಗೊಂಡಿದೆ.
ಉಳಿದ 2 ಕಿ.ಮೀ. ರಸ್ತೆಯ ಜಮೀನುಗಳಿಗೆ ನ್ಯಾಯಾಲಯದ ತಡೆಯಾಜ್ಞೆಯಿದ್ದು, ಪ್ರಸ್ತುತ ತಡೆಯಾಜ್ಞೆಯು ತೆರವುಗೊಳಿಸಿರುವ ಹಿನ್ನೆಲೆಯಲ್ಲಿ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಿ, ರಸ್ತೆ ಕಾಮಗಾರಿಯು ಭರದಿಂದ ಪ್ರಾರಂಭಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆರಕ್ಷಕ ಅಧೀಕ್ಷಕರು ಮತ್ತು ನಾಡಪ್ರಭು ಕೆಂಪೇಗೌಡ ವಿಭಾಗದ ಕಾರ್ಯಪಾಲಕ ಅಭಿಯಂತರು, ಬಿಡಿಎ ಕಾರ್ಯಪಡೆ ಹಾಗೂ ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ನೆರವೇರಿಸಲಾಯಿತು.

