ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಳೆದ 4 ದಿನಗಳಿಂದ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ 10 ಹಳ್ಳಿಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಈ ಬಗ್ಗೆ ತಹಶೀಲ್ದಾರ್ ಅವರು ಆದೇಶ ಹೊರಡಿಸಿದ್ದಾರೆ. ಆಲ್ದೂರು ಸುತ್ತಮುತ್ತಲಿನ 10 ಹಳ್ಳಿಗಳಲ್ಲಿ ಶನಿವಾರ ರಾತ್ರಿಯಿಂದ ಇಂದು ರಾತ್ರಿ 9 ಗಂಟೆವರೆಗೂ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಚಿಕ್ಕಮಗಳೂರು ತಾಲೂಕಿನ ತುಡುಕೂರು, ಆಲ್ದೂರು ಹೊಸಳ್ಳಿ, ತೋರಣಮಾವು, ಚಿತ್ತುವಳ್ಳಿ, ಆಲ್ದೂರುಪುರ, ಮಡೆನೇರಳು, ದೊಡ್ಡಮಾಗರವಳ್ಳಿ, ಗುಲ್ಲನ್ ಪೇಟೆ, ಹಾಂದಿ ಹಾಗೂ ಕೆಳಗೂರು ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಯಾಗಿದೆ.
ನಿಷೇಧಾಜ್ಞೆ ವೇಳೆ ಈ ಗ್ರಾಮಗಳಲ್ಲಿ 5ಕ್ಕೂ ಹೆಚ್ಚು ಜನ ಸೇರುವಂತಿಲ್ಲ, ಕಾರ್ಮಿಕರು ಮನೆಯಿಂದ ಹೊರಬರುವಂತಿಲ್ಲ, ಪಟಾಕಿ ಸಿಡಿಸುವಂತಿಲ್ಲ ಎಂದು ಉಲ್ಲೇಖಿಸಲಾಗಿದೆ. 17 ಆನೆಗಳ ತಂಡದ ಬೀಟಮ್ಮ ಗ್ಯಾಂಗಿನಲ್ಲಿ 1 ಸಲಗ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದೆ. ಸಲಗ ಸಾವನ್ನಪ್ಪಿದ ಜಾಗದ ಸುತ್ತಮುತ್ತಲಿನ ಹಳ್ಳಿಗಳಲ್ಲೇ ಕಾಡಾನೆ ಹಿಂಡು ಬೀಡುಬಿಟ್ಟಿದೆ.

