ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ (AQI) 162ಕ್ಕೆ ತಲುಪಿದ್ದು, ವಾಯುಮಾಲಿನ್ಯ ಅನಾರೋಗ್ಯಕಾರಿ ಹಂತದಲ್ಲಿದೆ. ಆದರೆ ಶಿವಮೊಗ್ಗ (175 AQI) ಹಾಗೂ ಬಳ್ಳಾರಿ (178 AQI) ನಗರಗಳಲ್ಲಿ ಬೆಂಗಳೂರಿಗಿಂತಲೂ ಹೆಚ್ಚು ಹಾನಿಕರ ಗಾಳಿಯ ಗುಣಮಟ್ಟ ದಾಖಲಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಈ ವಾಯುಮಾಲಿನ್ಯ ಪರಿಸ್ಥಿತಿ ಮಕ್ಕಳಿಗೆ, ಹಿರಿಯ ನಾಗರಿಕರಿಗೆ ಹಾಗೂ ಉಸಿರಾಟದ ಸಮಸ್ಯೆ ಹೊಂದಿರುವವರಿಗೆ ಗಂಭೀರ ಆರೋಗ್ಯ ಸಮಸ್ಯೆಗಳನ್ನುಂಟುಮಾಡುವ ಸಾಧ್ಯತೆ ಇದೆ. ವಿಶೇಷವಾಗಿ ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಶ್ವಾಸಕೋಶದ ಕ್ಯಾನ್ಸರ್ ಅಪಾಯ ಹೆಚ್ಚಾಗುವ ಭೀತಿ ಎದುರಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ನಿಗದಿಪಡಿಸಿರುವ ಮಾನದಂಡಕ್ಕಿಂತ ಬೆಂಗಳೂರಿನಲ್ಲಿ ಸೂಕ್ಷ್ಮ ಕಣಗಳ (PM 2.5) ಪ್ರಮಾಣ ಸುಮಾರು 5 ಪಟ್ಟು ಅಧಿಕವಾಗಿದ್ದು, ಇದು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಆತಂಕಕಾರಿ ಅಂಶವಾಗಿದೆ.
ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ಗಾಳಿಯ ಗುಣಮಟ್ಟದಲ್ಲಿ ಸ್ವಲ್ಪ ಏರುಪೇರು ಕಂಡುಬಂದರೂ, ಇನ್ನೂ ಆರೋಗ್ಯಕ್ಕೆ ಹಾನಿಕರ ಮಟ್ಟದಲ್ಲಿಯೇ ಮುಂದುವರಿದಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ವಾಯುಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸುವುದು, ಮಾಸ್ಕ್ ಬಳಕೆ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ವೈದ್ಯರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
ಇಂದಿನ ಪ್ರಮುಖ ನಗರಗಳ ಏರ್ ಕ್ವಾಲಿಟಿ (AQI):
ಬೆಂಗಳೂರು – 162
ಮಂಗಳೂರು – 156
ಮೈಸೂರು – 94
ಬೆಳಗಾವಿ – 138
ಕಲಬುರ್ಗಿ – 129
ಶಿವಮೊಗ್ಗ – 175
ಬಳ್ಳಾರಿ – 178
ಹುಬ್ಬಳ್ಳಿ – 156
ಉಡುಪಿ – 157
ವಿಜಯಪುರ – 111

