ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಮುಂದುವರಿದಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಇತ್ತೀಚೆಗಷ್ಟೇ ನಗರದ ಹೃದಯಭಾಗದಲ್ಲಿ ಐಷಾರಾಮಿ ಲ್ಯಾಂಬೋರ್ಗಿನಿ ಕಾರಿನಲ್ಲಿ ಡ್ರಿಫ್ಟಿಂಗ್ ಸ್ಟಂಟ್ ನಡೆಸಿದ ವಿಡಿಯೋ ವೈರಲ್ ಆಗಿದ್ದರೆ, ಇದೀಗ ಮದ್ಯಪಾನ ಮಾಡುತ್ತಲೇ ಬೈಕ್‌ನಲ್ಲಿ ತ್ರಿಬಲ್ ರೈಡಿಂಗ್ ಮಾಡುತ್ತಿರುವ ಯುವಕರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ನಗರದ ಬಿಟಿಎಂ ರಸ್ತೆಯಲ್ಲಿ ರಾತ್ರಿ ವೇಳೆ ಮೂವರು ಯುವಕರು ಸ್ಕೂಟರ್‌ನಲ್ಲಿ ಸಂಚರಿಸುತ್ತಿರುವ ದೃಶ್ಯಗಳು ಈ ವಿಡಿಯೋದಲ್ಲಿ ಕಾಣಿಸಿವೆ. ಹಿಂಬದಿ ಕುಳಿತಿದ್ದ ವ್ಯಕ್ತಿಯ ಕೈಯಲ್ಲಿ ಬಿಯರ್ ಬಾಟಲಿ ಇದ್ದು, ಮದ್ಯ ಸೇವಿಸುತ್ತಲೇ ಅಜಾಗರೂಕವಾಗಿ ಪ್ರಯಾಣಿಸುತ್ತಿರುವುದು ಗಮನ ಸೆಳೆಯುತ್ತದೆ. ಈ ವಿಡಿಯೋವನ್ನು “@karnatakaportf” ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಬೆಂಗಳೂರು ಸಂಚಾರಿ ಪೊಲೀಸರಿಗೆ ಟ್ಯಾಗ್ ಮಾಡಲಾಗಿದೆ.
ಈ ಘಟನೆಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸಂಚಾರ ಸುರಕ್ಷತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತವಾಗಿದೆ. ಕುಡಿದು ವಾಹನ ಚಲಾಯಿಸುವುದು ಮತ್ತು ತ್ರಿಬಲ್ ರೈಡಿಂಗ್ ಎರಡೂ ಕಾನೂನುಬಾಹಿರವಾಗಿದ್ದರೂ, ಯುವಕರು ನಿಯಮಗಳನ್ನು ಲೆಕ್ಕಿಸದೇ ವರ್ತಿಸುತ್ತಿರುವುದು ಕಂಡು ಬಂದಿದೆ.
ವಿಡಿಯೋದಲ್ಲಿ, ಬೈಕ್ ಸವಾರ ಬಿಯರ್ ಬಾಟಲಿ ಹಿಡಿದಿರುವುದರ ಜೊತೆಗೆ ಹಿಂಬದಿ ಸವಾರರು ರಸ್ತೆಯುದ್ದಕ್ಕೂ ಮದ್ಯಪಾನ ಮಾಡುತ್ತಾ ಮಾತನಾಡುವುದು, ಕೈ ಸನ್ನೆ ಮಾಡುವ ದೃಶ್ಯಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ನಗರದ ರಸ್ತೆಗಳನ್ನು ಆಟದ ಮೈದಾನವಾಗಿ ಬಳಸುತ್ತಿರುವ ಇಂತಹ ನಿರ್ಲಕ್ಷ್ಯ ವರ್ತನೆಗೆ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಚಾರಿ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

