ಬೆಂಗಳೂರು : ಮಲ್ಲೇಶ್ವರಂನಲ್ಲಿರುವ ನಗರದ ಪ್ರತಿಷ್ಠಿತ ಮಂತ್ರಿ ಮಾಲ್‌ಗೆ ಮತ್ತೊಮ್ಮೆ ಬೀಗ ಬಿದ್ದಿದೆ. ಆಸ್ತಿ ತೆರಿಗೆ ಪಾವತಿಸದೇ ಇರುವ ಹಿನ್ನೆಲೆಯಲ್ಲಿ, ಬುಧವಾರ ಬೆಳಿಗ್ಗೆ ಬ್ರುಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅಧಿಕಾರಿಗಳು ಮಾಲ್‌ನ್ನು ಅಧಿಕೃತವಾಗಿ ಸೀಲ್ ಮಾಡಿ ಲಾಕ್ ಮಾಡಿದ್ದಾರೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಕೋಟ್ಯಾಂತರ ರೂಪಾಯಿಗಳ ತೆರಿಗೆ ಬಾಕಿ ಉಳಿದಿದ್ದು, ಹಲವು ಬಾರಿ ನೋಟಿಸ್ ನೀಡಿದರೂ ಪಾವತಿ ಆಗದ ಕಾರಣದಿಂದಲೇ ಕ್ರಮ ಕೈಗೊಳ್ಳಲಾಗಿದೆ. ತೆರಿಗೆ ಬಾಕಿ ವಸೂಲಿಗೆ BBMP ಇತ್ತೀಚೆಗೆ ಕಟ್ಟುನಿಟ್ಟಿನ ನಿಲುವು ತಾಳಿದ್ದು, ಅದರ ಭಾಗವಾಗಿ ಮಂತ್ರಿ ಮಾಲ್ ಮೇಲೂ ಕಠಿಣ ಕ್ರಮ ಜಾರಿಗೊಳಿಸಲಾಗಿದೆ.
ಈ ಹಿಂದೆ ಕೂಡ ತೆರಿಗೆ ವಿವಾದದ ಹಿನ್ನೆಲೆ ಮಂತ್ರಿ ಮಾಲ್‌ನ್ನು ಹಲುವಾರಿ ಲಾಕ್ ಮಾಡಲಾಗಿತ್ತು. ಪಾವತಿ ಭರವಸೆ ಪಡೆದ ನಂತರ ಮಾತ್ರ ಕ್ರಮವನ್ನು ಹಿಂತೆಗೆದುಕೊಳ್ಳಲಾಗುತ್ತಿತ್ತು. ಆದರೆ ಈ ಬಾರಿ ತೆರಿಗೆ ಪಾವತಿ ಪೂರ್ಣಗೊಳ್ಳುವವರೆಗೆ ಲಾಕ್ ತೆರವುಗೊಳ್ಳುವುದಕ್ಕೆ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕಸ್ಮಾತ್ ಲಾಕ್‌ನಿಂದಾಗಿ ಮಾಲ್‌ನೊಳಗಿನ ಕೆಲವು ಅಂಗಡಿಗಳು ಕಾರ್ಯನಿರ್ವಹಣೆಗೆ ತಾತ್ಕಾಲಿಕ ಅಡಚಣೆ ಎದುರಿಸಿದ್ದು, ಗ್ರಾಹಕರೂ ಗೊಂದಲಕ್ಕೀಡಾದರು. ತೆರಿಗೆ ಪಾವತಿ ಕುರಿತಂತೆ ಮಾಲ್ ನಿರ್ವಹಣೆಯ ಪ್ರತಿಕ್ರಿಯೆ ಇನ್ನಷ್ಟೇ ಬರಬೇಕಿದೆ.

