ಬೆಂಗಳೂರು : ನಿನ್ನೆ ರಾತ್ರಿಯಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ವರುಣನ ಅಬ್ಬರಕ್ಕೆ ರಾಜಧಾನಿ ಬೆಂಗಳೂರು ಅಲ್ಲೋಲ ಕಲ್ಲೋಲವಾಗಿದೆ.ರಸ್ತೆ ಜಲಾವೃತಗೊಂಡು ಟ್ರಾಫಿಕ್ ಜಾಮ್ ನಿಂದಾಗಿ ಜನ ಜೀವನ ಸಂಪೂರ್ಣವಾಗಿ ಆಸ್ತವೆಸ್ತವಾಗಿದೆ.
ಮೆಜೆಸ್ಟಿಕ್ ಬಳಿಯ ಓಕಳಿಪುರ ಅಂಡರ್ಪಾಸ್ನಲ್ಲಿ ನೀರು ನಿಂತು ನೀರಿನಲ್ಲಿ ಎರಡು ವಾಹನಗಳು ಕೆಟ್ಟುನಿಂತವು. ಪರಿಣಾಮವಾಗಿ ಓಕಳಿಪುರದ ಸುತ್ತಮುತ್ತ ಟ್ರಾಫಿಕ್ಜಾಮ್ ಉಂಟಾಯಿತು. ನಿಧಾನಗತಿಯಲ್ಲಿ ಚಲಿಸುತ್ತಿರುವ ವಾಹನಗಳ ದಟ್ಟಣೆಯಲ್ಲಿ ಸಿಲುಕಿ ವಾಹನ ಸವಾರರ ಪರದಾಟಪಟ್ಟರು. ಅಂಡರ್ಪಾಸ್ ಬಳಿ ಟ್ರಾಫಿಕ್ನಲ್ಲಿ ಸಿಲುಕಿ ಆಂಬುಲೆನ್ಸ್ ಕೂಡ ಪರದಾಡುವಂತಾಯಿತು.
ಮುಂಜಾನೆಯಿಂದ ಬಿಟ್ಟೂಬಿಡದೆ ಮಳೆ ಸುರಿದಿದ್ದರಿಂದ ಬೆಳಗ್ಗೆ ಕಚೇರಿ, ಶಾಲೆಗಳಿಗೆ ತೆರಳುವ ಮಕ್ಕಳು ಸಂಕಷ್ಟಕ್ಕೀಡಾದರು. ಒಮ್ಮೆ ಧೋ ಎಂದು ಸುರಿಯುವ ಮಳೆ, ನಂತರ ಜಿಟಿಜಿಟಿ ಜಿನುಗುವ ಮಳೆಯಿಂದ ಬೈಕ್ ಸವಾರರು ಒದ್ದಾಡಿದರು. ಮಳೆಯಿಂದಾಗಿ ಹಲವೆಡೆ ಟ್ರಾಫಿಕ್ ಜಾಮ್ ಆಗಿ ಸವಾರರಿಗೆ ಸಂಕಷ್ಟ ಎದುರಾಯಿತು.
ಬೆಂಗಳೂರಿನ 8ನೇ ಮೈಲಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು. 8ನೇ ಮೈಲಿನಿಂದ ಹೆಸರಘಟ್ಟ ರಸ್ತೆಯಲ್ಲಿ ಸಂಚಾರ ದಟ್ಟಣೆಯಾಗಿ ಸವಾರರು ಪರದಾಡಿದರು. ದೇವನಹಳ್ಳಿಯಲ್ಲಿ ಮಳೆಯಿಂದ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಪರದಾಡಿದರು. ದೊಡ್ಡಬಳ್ಳಾಪುರ, ಹೊಸಕೋಟೆ ಭಾಗದಲ್ಲೂ ಜಿಟಿಜಿಟಿ ಮಳೆಯಾಗಿದೆ.
ಹೆಚ್ಎಂಟಿ ಲೇಔಟ್ನಲ್ಲಿ ಬೃಹತ್ ಮರ ಧರೆಗುರುಳಿ ಕಾರೊಂದು ಸಂಪೂರ್ಣ ಜಖಂಗೊಂಡಿತು. ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಮರ ಉರುಳಿತ್ತು. ಮರ ತೆರವಿಗೆ ಬಿಬಿಎಂಪಿಗೆ ದೂರು ನೀಡಿದ್ದರೂ ನಿರ್ಲಕ್ಷ್ಯ ವಹಿಸಲಾಗಿತ್ತು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು. ಬೆಳಗ್ಗೆ 5 ಗಂಟೆ ಸುಮಾರಿಗೆ ಮರ ಧರೆಗುರುಳಿದ್ದು, ಜನಸಂಚಾರ ಕಡಿಮೆ ಇದ್ದಿದ್ದಕ್ಕೆ ದೊಡ್ಡ ಅನಾಹುತ ತಪ್ಪಿದೆ.
ಕೆರೆಯಂತಾದ ಆರ್ ಆರ್ ನಗರದ ರಸ್ತೆಗಳು :
ನಿನ್ನೆ ರಾಜಧಾನಿ ಬೆಂಗಳೂರುನಲ್ಲಿ ಭೀಕರ ವರುಣನ ಆರ್ಭಟಕ್ಕೆ ಬೆಂಗಳೂರಿನ ಜನತೆ ಸಂಪೂರ್ಣವಾಗಿ ನಲುಗಿ ಹೋಗಿದ್ದಾರೆ. ಅದರಲ್ಲೂ ಬೆಂಗಳೂರು ನಗರದ ಆರ್ ಆರ್ ನಗರದಲ್ಲಿ ರಸ್ತೆಗಳು ಸಂಪೂರ್ಣವಾಗಿ ಕೆರೆ ಅಂತಾಗಿದ್ದು ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ ಮಳೆಯಿಂದ ರಸ್ತೆ ಸಂಪೂರ್ಣವಾಗಿ ಕೆಸರು ಗದ್ದೆಯಂತೆ ಆಗಿದೆ.ಆರ್ ಆರ್ ನಗರದ ಕೆರೆ ಕೋಡಿ ರಸ್ತೆಯಲ್ಲಿ ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ. ಸಂಪೂರ್ಣ ಕೆಸರುಗದ್ದೆಯಾಗಿ ರಸ್ತೆ ಬದಲಾಗಿದೆ ಗುಂಡಿ ರಸ್ತೆಯಲ್ಲಿ ಟ್ರ್ಯಾಕ್ ಕಾರು ಚಾಲಕರು ಪರದಾಟ ನಡೆಸುತ್ತಿದ್ದಾರೆ.