Bengaluru Rains : ನಿನ್ನೆ ಸುರಿದ ಧಾರಾಕಾರ ಮಳೆಗೆ ಹಿಡಿ ಸಿಟಿ ಹೈರಾಣಾಗಿದ್ದು, ಜನ ಇದು ಗ್ರೇಟರ್ ಬೆಂಗಳೂರು ಅಲ್ಲ ವಾಟರ್ ಬೆಂಗಳೂರು ಎಂದು ಇಡಿ ಶಾಪ ಹಾಕುತ್ತಿದ್ದಾರೆ.ಮೆಜೆಸ್ಟಿಕ್, ಸಿಟಿ ಮಾರ್ಕೆಟ್, ಜಯನಗರ, ವಿಜಯನಗರ, ಚಾಮರಾಜಪೇಟೆ ಸೇರಿದಂತೆ ನಗರದ ಬಹುತೇಕ ಪ್ರದೇಶಗಳಲ್ಲಿ ನಿನ್ನೆ ರಾತ್ರಿ ಭಾರಿ ಮಳೆಯಾಗಿದೆ.ರಾತ್ರಿ ಸುರಿದ ಭಾರಿ ಮಳೆಗೆ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ತಡರಾತ್ರಿ 1.30 ರ ನಂತರ ಪ್ರಾರಂಭವಾದ ಮಳೆ ಮುಂಜಾನೆ ವರೆಗೂ ಸುರಿದಿದೆ. ಜಯನಗರ, ಬಿಟಿಎಂ ಲೇಔಟ್, ಯಶವಂತಪುರ ಪ್ರದೇಶಗಳಲ್ಲಿಯೂ ಭಾರೀ ಮಳೆಯಾಗಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ.
ತಡರಾತ್ರಿ ಸುರಿದ ಗುಡುಗು ಸಹಿತ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡು ಸಿಟಿ ಮಾರ್ಕೆಟ್, ದಕ್ಷಿಣ ಮತ್ತು ಇತರ ಕೆಲವು ಭಾಗಗಳಲ್ಲಿ ಮುಂಜಾನೆಯೇ ಸಂಚಾರಕ್ಕೆ ಅಡಚಣೆಯಾಯಿತು. ರಾತ್ರಿ ಸುರಿದ ಮಳೆ ಬ್ಯಾಂಡ್ ಬೆಂಗಳೂರಿನ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದೇ ಅಲ್ಲದೆ ಇದು ಗ್ರೇಟರ್. ಬೆಂಗಳೂರು ಅಲ್ಲ ವಾಟರ್ ಬೆಂಗಳೂರು ಎನ್ನುವುದಕ್ಕೆ ಸಾಕ್ಷಿಯಾಂತಿತ್ತು. ಪ್ರತಿ ಬಾರಿ ಮಳೆ ಬಂದಾಗಲೂ ಕೆರೆಯಂತಾಗುವ ಸಾಯಿಲೇಔಟ್‌ನಲ್ಲಿ ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿ ಭಾರಿ ಅವಾಂತರ ಸೃಷ್ಟಿಯಾಗಿತ್ತು. ಗೊರಗುಂಟೆಪಾಳ್ಯ, ಹೆಬ್ಬಾಳ ಸುತ್ತಮುತ್ತ ರಸ್ತೆಗಳಲ್ಲಿ ಅಳವಾದ ಗುಂಡಿಗಳು ಬಿದ್ದು ವಾಹನ ಸವಾರರು ಮುಂದೆ ಸಾಗಲಾರದೆ ಪರದಾಡುವಂತಾಗಿತ್ತು.
ತಕ್ಷಣ ಒಂದು ಸಾವಿರ ಕೋಟಿ ರೂ. ಬಿಡುಗಡೆಗೆ ಆಗ್ರಹ
ರಾಜಧಾನಿ ಬೆಂಗಳೂರಿನಲ್ಲಿ ಸಂಭವಿಸಿರುವ ಮಳೆ ಅನಾಹುತ ಪರಿಹಾರ ಕಾರ್ಯಕ್ಕೆ ತಕ್ಷಣ ಒಂದು ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕರಾದ ಆರ್. ಅಶೋಕ್ ಸರ್ಕಾರವನ್ನು ಆಗ್ರಹಿಸಿದ್ದಾರೆ. ಭಾನುವಾರ ರಾತ್ರಿ ನಗರದಲ್ಲಿ 103 ರಿಂದ 130 ಮಿಲಿ ಮೀಟರ್ ವರೆಗೆ ಮಳೆ ಬಿದ್ದು ಇಡೀ ನಗರದಲ್ಲಿ ಅವಾಂತರ ಸೃಷ್ಟಿಯಾಗಿದ್ದು, ತ್ವರಿತಗತಿಯಲ್ಲಿ ಪರಿಹಾರ ಕಾರ್ಯ ಕೈಗೆತ್ತಿಕೊಂಡು ಸಂತ್ರಸ್ತರ ನೆರವಿಗೆ ಧಾವಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮುಂಗಾರು ಪೂರ್ವದ ಒಂದೇ ಒಂದು ಮಳೆ ಕಾಂಗ್ರೆಸ್ ಸರ್ಕಾರದ “ಬ್ರಾಂಡ್ ಬೆಂಗಳೂರು”ನ ನಿಜ ಬಣ್ಣ ಬಯಲು ಮಾಡಿದೆ. ಇಂತಹ ಸನ್ನಿವೇಶದಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಬೇಕಿದ್ದ ಸಿಎಂ, ಡಿಸಿಎಂ ಮತ್ತು ಸಚಿವರು ಸಾಧನಾ ಸಮಾವೇಶದಲ್ಲಿ ಮೆರೆದಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾನುವಾರ ಮಧ್ಯ ರಾತ್ರಿಯಿಂದಲೇ ನಗರದ ನಾನಾ ಪ್ರದೇಶಗಳಿಂದ ತಮಗೆ ದೂರವಾಣಿ ಕರೆಗಳ ಮಹಾಪೂರ ಹರಿದು ಬರುತ್ತಿದೆ. ಅನೇಕ ಬಡಾವಣೆಗಳು ಜಲಾವೃತವಾಗಿವೆ, ನೂರಾರು ವಾಹನಗಳು ಪ್ರವಾಹದಲ್ಲಿ ತೇಲಿ ಹೋಗಿವೆ, ಅನಾಥಾಶ್ರಮಕ್ಕೂ ನೀರು ನುಗ್ಗಿದೆ, ಇಡೀ ರಾತ್ರಿ ಜನರು ಜಾಗರಣೆ ಮಾಡುತ್ತಿದ್ದಾರೆ, ಅವರಿಗೆ ಊಟದ ವ್ಯವಸ್ಥೆ ಇಲ್ಲ, ಇಷ್ಟಾದರೂ ಬಿಬಿಎಂಪಿ ನೆರವಿಗೆ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದಿನ ವರ್ಷದ ಲೋಪಗಳಿಂದ ಪಾಠ ಕಲಿಯದ ಸರ್ಕಾರದ ಬೇಜವಾಬ್ದಾರಿತನದಿಂದ ನಗರದಲ್ಲಿ ಅನಾಹುತ ಸಂಭವಿಸಿದೆ. ಮುಂಚಿತವಾಗಿ ಮೋರಿ, ಚರಂಡಿ, ರಾಜ ಕಾಲುವೆಗಳಲ್ಲಿ ಹೂಳು ತೆಗೆಸುವ ಕೆಲಸ ಮಾಡಬೇಕಿತ್ತು. ನಗರದ ಅನೇಕ ಕಡೆ ವೈಟ್ ಟಾಫಿಂಗ್ ಮತ್ತು ರಿಪೇರಿ ಕಾಮಗಾರಿ ನಡೆಯುತ್ತಿದ್ದು ಅಲ್ಲಿನ ಅವಶೇಷಗಳನ್ನು ತೆರವು ಮಾಡಿದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ.
ಬಿಬಿಎಂಪಿ ಮುನ್ನೆಚ್ಚರಿಕೆ ವಹಿಸದಿರುವುದೇ ಅನಾಹುತಗಳಿಗೆ ಕಾರಣ ಎಂದು ಖುದ್ದು ಗೃಹ ಸಚಿವ ಪರಮೇಶ್ವರ ಅವರು ಹೇಳಿದ್ದಾರೆ. ಉಸ್ತುವಾರಿ ಸಚಿವ ಡಿಕೆಶಿ ಅವರ ವೈಫಲ್ಯಕ್ಕೆ ಇದಕ್ಕಿಂತ ಇನ್ಯಾವುದೇ ಸರ್ಟಿಫಿಕೇಟ್ ಬೇಕಾ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಮಳೆಗೆ ಬಲಿಯಾದ ಮಹಿಳೆ, 5 ಲಕ್ಷ ಪರಿಹಾರ ಘೋಷಣೆ
ವೈಟ್ ಫೀಲ್ಡ್ ನಲ್ಲಿ ಗೋಡೆ ಕುಸಿದು ಮಹಿಳೆ ಮೃತಪಟ್ಟಿದ್ದಾರೆ. ಬಿಬಿಎಂಪಿಯಿಂದ ಮಹಿಳೆಯ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ. ಇಂದು ಡಿಕೆ ಶಿವಕುಮಾರ್ ಕೆಲ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ ನಾಡಿದ್ದು ನಾನು ಮತ್ತು ಕೆಲಸ ಸಚಿವರು ಇಡೀ ದಿನ ಬೆಂಗಳೂರು ನಗರ ಪ್ರದಕ್ಷಿಣೆ ಹಾಕುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಕಂಟ್ರೋಲ್ ರೂಮ್ ನಲ್ಲಿ ಸಿಎಂ, ಡಿಸಿಎಂ.
ಬೆಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದ್ದು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಬೇಕಿತ್ತು, ಆದರೆ ಇಂದು ಕೂಡ ಭಾರಿ ಮಳೆಯಿಂದಾಗಿ ಸಿಟಿ ರೌಂಡ್ ರದ್ದುಗೊಳಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಕಂಟ್ರೋಲ್ ರೂಮ್ಗೆ ತೆರಳಿದರು.
ಬಳಿಕ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಅಧಿಕಾರಿಗಳಿಂದ ಮಳೆ ಹಾನಿ ಪ್ರದೇಶಗಳ ಕುರಿತಂತೆ ಮಾಹಿತಿ ಪಡೆದುಕೊಂಡರು. ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ, ಟ್ರಾಫಿಕ್ ಜಾಮ್ ಆಗುತ್ತದೆ ಎಂದು ಇಂದಿನ ಸಿಟಿ ರೌಂಡ್ಸ್ ರದ್ದು ಮಾಡಿದ್ದೇವೆ. ಬೆಂಗಳೂರಿನಲ್ಲಿ ತಗ್ಗು ಪ್ರದೇಶಗಳನ್ನು ಗುರುತಿಸಿದ್ದೇವೆ, ರಾಜಕಾಲುವೆ ಕೆಲಸ ಪ್ರಗತಿಯಲ್ಲಿದೆ.
166 ಸೂಕ್ಷ್ಮ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಕೆಲಸ ನಡೆದಿದೆ. ನಾಡಿದ್ದು ಇಡೀ ದಿನ ಬೆಂಗಳೂರು ನಗರ ಪ್ರದಕ್ಷಿಣೆ ಮಾಡುತ್ತೇವೆ. ಎಲ್ಲೆಲ್ಲಿ ಅನಾಹುತ ಆಗಿದೆ ಅಲ್ಲೆಲ್ಲ ನಾವು ಭೇಟಿ ನೀಡುತ್ತೇವೆ. ಜನರಿಂದ ಸಮಸ್ಯೆ ಆಲಿಸಿ ಅಧಿಕಾರಿಗಳಿಗೆ ಸೂಚನೆ ಕೊಡುತ್ತೇವೆ.
ಶಾಶ್ವತ ಮಳೆನೀರುಗಾಲುವೆ ನಿರ್ಮಾಣಕ್ಕೆ ಯೋಜನೆ : ಡಿಕೆಶಿ
ರಾಜಧಾನಿ ಬೆಂಗಳೂರಿನಲ್ಲಿ ಮಳೆಯಿಂದಾಗುವ ಅವಾಂತರಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಶ್ವತ ಮಳೆನೀರುಗಾಲುವೆ ನಿರ್ಮಾಣಕ್ಕಾಗಿ ಯೋಜನೆ ರೂಪಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ವಿಜಯನಗರದ ಹೊಸಪೇಟೆಯಲ್ಲಿ ನಡೆಯಲಿರುವ ಸಾಧನಾ ಸಮಾವೇಶದ ಪೂರ್ವಸಿದ್ಧತೆ ಪರಿಶೀಲಿಸಿದ ಬಳಿಕ ಮಳೆ ಅವಾಂತರ ಕುರಿತು ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಬೆಂಗಳೂರಿನಲ್ಲಿ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲು ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ ಎಂದರು.
ಬೆಂಗಳೂರು ಮಳೆ ಅವಾಂತರಕ್ಕೆ ಶಾಶ್ವತ ಪರಿಹಾರವೇ ಇಲ್ಲವೇ ಎಂದು ಕೇಳಿದಾಗ, ಮಳೆ ಪ್ರಕೃತಿ. ಅದು ಯಾರ ನಿಯಂತ್ರಣದಲ್ಲೂ ಇಲ್ಲ. ಮಳೆ ಬೀಳುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿತ್ತು. ನಮ್ಮ ಅಧಿಕಾರಿಗಳು ನಾಲ್ಕು ದಿನಗಳಿಂದಲೇ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಬೆಂಗಳೂರಿನಲ್ಲಿ ಮಳೆ ನೀರುಗಾಲುವೆಯನ್ನು ಶಾಶ್ವತವಾಗಿ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ ವಿಶ್ವಬ್ಯಾಂಕ್‌ನಿಂದ ಹಾಗೂ ವಿಪತ್ತು ನಿರ್ವಹಣಾ ಇಲಾಖೆಯಿಂದ 2 ಸಾವಿರ ಕೋಟಿ ರೂ. ನೆರವು ಪಡೆಯಲಾಗಿದೆ ಎಂದು ತಿಳಿಸಿದರು.
ಪರಿಸ್ಥಿತಿಯ ಸಮರ್ಥ ನಿರ್ವಹಣೆ:
ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳು ಜಲಾವೃತವಾಗಿದೆ ಎಂದು ಕೇಳಿದಾಗ, ಮಳೆ ಬರಬೇಕು. ಹೆಚ್ಚು ಮಳೆ ಬಂದಷ್ಟೂ ಸರ್ಕಾರಕ್ಕೆ ಲಾಭ. ಭಾನುವಾರ ರಾತ್ರಿ ಸುರಿದ ಮಳೆಯಿಂದ ಗೋಡೆ ಕುಸಿದು ಒಂದು ಸಾವಾಗಿದೆ ಎಂದು ಮಾಹಿತಿ ಬಂದಿದೆ. ಉಳಿದಂತೆ ಯಾವುದೇ ಅವಘಡ ಸಂಭವಿಸಿಲ್ಲ. ನಮ್ಮ ಅಧಿಕಾರಿಗಳು ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ. ಕೆಲ ತಗ್ಗು ಪ್ರದೇಶಗಳಲ್ಲಿ ಮನೆ ಕಟ್ಟಿಕೊಂಡಿರುವ ಜಾಗದಲ್ಲಿ ನೀರು ನುಗ್ಗಿದೆ. ಮಳೆ ಹಾನಿ ಪ್ರದೇಶಕ್ಕೆ ನಾನು, ಮುಖ್ಯಮಂತ್ರಿಗಳು ಭೇಟಿ ನೀಡಿ ಪರಿಶೀಲನೆ ಮಾಡುತ್ತೇವೆ ಎಂದು ಶಿವಕುಮಾರ್ ಹೇಳಿದರು.
ಕುಮಾರಸ್ವಾಮಿ ಅವರ ಟೀಕೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ನಾನು ಇಲ್ಲಿಗೆ ಪ್ರವಾಸ ಮಾಡುವುದಕ್ಕೆ ಬಂದಿದ್ದೇನೆಯೇ? ಜನರ ಬದುಕು ಸರಿ ಮಾಡುವ ಉದ್ದೇಶದೊಂದಿಗೆ ಬಂದಿದ್ದೇನೆ. ಅವರು ವಿರೋಧ ಪಕ್ಷದಲ್ಲಿದ್ದಾರೆ ಅವರಿಗೆ ಮತ್ತು ಆರ್. ಅಶೋಕ್ ಅವರಿಗೆ ಸರ್ಕಾರದ ವಿರುದ್ಧ ಟೀಕೆ ಮಾಡದಿದ್ದರೆ ಸಮಾಧಾನವೇ ಆಗುವುದಿಲ್ಲ. ಅವರ ಸ್ಥಾನಕ್ಕೆ ಧಕ್ಕೆಯಾಗುತ್ತದೆ. ಆದ್ದರಿಂದ, ನಾಲ್ಕು ಮಾತು ಆಡಿದ್ದಾರೆ ಎಂದರು.
ಡಿ.ಕೆ. ಶಿವಕುಮಾರ್ ಅವರು ದೇಶದ ನಂಬರ್ 1 ಶ್ರೀಮಂತರಾಗಲು ಗ್ರೇಟರ್ ಬೆಂಗಳೂರು ಜಾರಿ ಮಾಡಿದ್ದಾರೆ ಎಂಬ ಶ್ರೀರಾಮುಲು ಅವರ ಟೀಕೆ ಬಗ್ಗೆ ಕೇಳಿದಾಗ, ಅವರ ಆಶೀರ್ವಾದ ನನ್ನ ಮೇಲಿರಲಿ. ಶ್ರೀರಾಮುಲು ಅವರಿಗಾಗಲಿ, ಅಶೋಕ್ ಅವರಿಗಾಗಲಿ ನಾನು ಈಗ ಇಲ್ಲಿ ಉತ್ತರ ನೀಡುವುದಿಲ್ಲ. ಬಿಜೆಪಿ ಹಾಗೂ ವಿರೋಧ ಪಕ್ಷದವರು ಹೊಸಪೇಟೆಯಲ್ಲಿ 1 ಕೋಟಿಗೂ ಹೆಚ್ಚು ಜನರಿಗೆ ನೀಡುತ್ತಿರುವ ಭೂ ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡಲಿ ಎಂದು ತಿರುಗೇಟು ನೀಡಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ತಲೆ ತಗ್ಗಿಸುವಂತಾಗಿದೆ: ಸಿ.ಟಿ ರವಿ
ಭಾರೀ ಮಳೆಯಿಂದ (Rain) ಬೆಂಗಳೂರಿನ (Bengaluru) ಹಲವೆಡೆ ನಾನಾ ಅವಾಂತರಗಳಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ತಲೆ ತಗ್ಗಿಸುವಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ (C.T Ravi) ಬೇಸರ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ (Chikkamagaluru) ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ರಾಜ್ಯ-ದೇಶದ ಬೊಕ್ಕಸಕ್ಕೆ ಬೆಂಗಳೂರಿಗರಿಂದ ದೊಡ್ಡ ಪ್ರಮಾಣದ ಹಣ ಬರುತ್ತದೆ. ಆದರೆ, ಬೆಂಗಳೂರಿಗರ ಬದುಕನ್ನ ನಾವು ಮುಳುಗಿಸುತ್ತಿದ್ದೇವೆ. ಕೆಂಪೇಗೌಡರ ಕಾಲ ಹಾಗೂ ಮದ್ಯದಲ್ಲಿ ಪ್ಲ್ಯಾನಡ್ ಬೆಂಗಳೂರು ಇತ್ತು. ಈಗ ಅನ್ ಪ್ಲ್ಯಾನಡ್ ಬೆಂಗಳೂರಾಗಿದೆ ಎಂದು ಕಿಡಿಕಾರಿದ್ದಾರೆ.

