ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೈಕ್ ಸವಾರನೊಬ್ಬ ಕಾಶ್ಮೀರ ಮ್ಯಾಪ್ ನಲ್ಲಿ ಪಾಕ್ ಬಾವುಟಮುದ್ರಿತವಾಗಿರುವ ಟೀ ಶರ್ಟ್ ಧರಿಸಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಜಮ್ಮು ಕಾಶ್ಮೀರ ಮ್ಯಾಪ್ ಕೇಸರಿ ಹಾಗೂ ಅರ್ಧ ಚಂದ್ರ ನಕ್ಷತ್ರವಿರುವ ಹಸಿರು ಬಣ್ಣದ ಧ್ವಜದಿಂದ ಕೂಡಿದ್ದು, ಇದರ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ನಮ್ಮ ಮಿನಿ ರೇಡಿಯೊದಂತಹ ಖಾತೆಗಳೂ ಸಹ ಈ ವಿಡಿಯೊ ಹಂಚಿಕೊಂಡು ಇಂಥವರಿಂದ ಬೆಂಗಳೂರಿಗೆ ಕೆಟ್ಟ ಹೆಸರು ಎಂದು ಬರೆದುಕೊಳ್ಳುತ್ತಿದ್ದಾರೆ. ಈ ವೀಡಿಯೋ ನೋಡಿದ ಜನ ಪಾಕಿಸ್ತಾನದ ಬಾವುಟ ಎಂದು ಆರೋಪಿಸಿ ನೆಟ್ಟಿಗರು ಕಿಡಿಕಾರುತ್ತಿದ್ದು, ಆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿದ್ದರಾಮಯ್ಯ ಹಾಗೂ ಬೆಂಗಳೂರು ಪೊಲೀಸರ ಎಕ್ಸ್ ಖಾತೆಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.
ಭಾರತೀಯ ಪ್ರಜೆಯಾಗಿ ಶತ್ರು ರಾಷ್ಟ್ರ ಪಾಕಿಸ್ತಾನವನ್ನು ಬೆಂಬಲಿಸುವುದು ನಮ್ಮ ಭಾರತ ದೇಶಕ್ಕೆ ಮಾಡಿದ ಅಪಮಾನ. ಈ ವ್ಯಕ್ತಿಯು ತನ್ನ ಟೀ ಶರ್ಟ್ ಮೇಲೆ ಜಮ್ಮು ಕಾಶ್ಮೀರದ ಮ್ಯಾಪ್‌ನಲ್ಲಿ ಪಾಕಿಸ್ತಾನದ ಧ್ವಜ ಹಾಕಿರುವ ಚಿತ್ರವನ್ನು ಹಾಕಿಕೊಂಡು ಓಡಾಡುವುದು ಖಂಡನೀಯ. ಇಂತಹ ದೇಶದ್ರೋಹಿಗಳ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾನು ಬೆಂಗಳೂರು ಪೊಲೀಸರನ್ನು ಒತ್ತಾಯಿಸುತ್ತೇನೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮಾಡಿದ್ದಾರೆ.
ಇನ್ನೂ ಕೆಲವರು ಅದು ಪಾಕಿಸ್ತಾನದ ಬಾವುಟ ಅಲ್ಲವೇ ಅಲ್ಲ. ಜಮ್ಮು ಕಾಶ್ಮೀರದಲ್ಲಿ ಬಳಸುವ ರಾಜ್ಯದ ಬಾವುಟ ಎಂದು ಕಾಮೆಂಟ್ ಮಾಡಿದ್ದಾರೆ. ಎಡಭಾಗದಲ್ಲಿ ಹಳದಿ ಬಣ್ಣ ಹಾಗೂ ಬಲಭಾಗದಲ್ಲಿ ಅರ್ಧಚಂದ್ರ ನಕ್ಷತ್ರವಿರುವ ಧ್ವಜ ಜಮ್ಮು ಕಾಶ್ಮೀರದ್ದು ಎಂದು ಹಲವು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಸಾರ್ವಜನಿಕವಾಗಿ ಪಾಕ್ ಬಾವುಟ ಹಿಡಿದುಕೊಂಡರೇನೆ ಕಿಚ್ಚು ಹಬ್ಬಿಕೊಳ್ಳುವ ದಿನಗಳಲ್ಲಿ ಶರ್ಟ್ ಗಳಲ್ಲೇ ಪಾಕ್ ಬಾವುಟ ಮುದ್ರಿಸಿಕೊಂಡು ತಿರುಗಾಡುತ್ತಿರುವ ಯುವಕರ ಬಗ್ಗೆ ಟೀಕಿಗಳು ವ್ಯಕ್ತವಾಗುತ್ತಿವೆ. ಕೋಮುಗಲಭೆ ಉಂಟಾಗಲು ಇಂತಹ ಸಮಾಜಘಾತುಕ ಘಟನೆಗಳು ಕಾರಣವಾಗುವುದರಲ್ಲಿ ಸಂಶಯ ಇಲ್ಲ. ಇನ್ನು ಈ ರೀತಿಯ ವೀಡಿಯೋಗಳಿಂದ ಸಮಾಜದಲ್ಲಿ ತಲ್ಲಣ ಸೃಷ್ಟಿಸುತ್ತದೆ. ಇಷ್ಟೊಂದು ಧೈರ್ಯವಾಗಿ ಪಾಕ್ ಬಾವುಟವಿರುವ ಟೀ ಶರ್ಟ್ ಧರಿಸಿರುವವ ವಿರುದ್ಧ ತನಿಖೆಗೂ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

