ಬೀದರ್: ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ತಡರಾತ್ರಿ ಸರಣಿ ಕಳ್ಳತನ ನಡೆದಿದ್ದು ಜನರಲ್ಲಿ ಆತಂಕ ಉಂಟಾಗಿದೆ. ಚಿಟಗುಪ್ಪಾ ತಾಲೂಕಿನ ಮಂಗಲಗಿ ಹಾಗೂ ಮುಸ್ತರಿವಾಡಿ ಗ್ರಾಮಗಳ ಎರಡು ದೇವಸ್ಥಾನಗಳಲ್ಲಿ ದೇವಿಯ ಕೊರಳಲ್ಲಿದ್ದ ತಾಳಿಯ ಬಂಗಾರವನ್ನು ಕಳ್ಳರು ಕದ್ದೊಯ್ದು, ಕರಿಮಣಿಯನ್ನು ಅಲ್ಲೇ ಬಿಸಾಡಿ ಪರಾರಿಯಾಗಿದ್ದಾರೆ.
ಇದಷ್ಟೇ ಅಲ್ಲದೆ, ಚಿಟಗುಪ್ಪಾ ತಾಲೂಕಿನ ಮುತ್ತಂಗಿ ಗ್ರಾಮದಲ್ಲಿರುವ ಡಿಸಿಸಿ ಬ್ಯಾಂಕ್ ಕೀ ಮುರಿದು ಬ್ಯಾಂಕ್ ದರೋಡೆ ಮಾಡಲು ಕಳ್ಳರು ಯತ್ನ ನಡೆಸಿದ್ದಾರೆ. ಆದರೆ ಒಳನುಗ್ಗುವ ಮೊದಲುಲೇ ಅವರು ಸ್ಥಳದಿಂದ ಪರಾರಿಯಾಗಿರುವ ಮಾಹಿತಿ ದೊರೆತಿದೆ.
ತಾಲೂಕಿನ ನಿರ್ಣಾ ಗ್ರಾಮದಲ್ಲೂ ಸರಾಫ ಅಂಗಡಿಯ ಶಟರ್ ಮುರಿದು ಚಿನ್ನಾಭರಣಗಳನ್ನು ಲೂಟಿ ಮಾಡಲಾಗಿದೆ. ಮಂಗಲಗಿ ಗ್ರಾಮದಲ್ಲಿ ಮೂರು ಮನೆಗಳು ಹಾಗೂ ಒಂದು ಕಿರಾಣ ಅಂಗಡಿಯಲ್ಲಿ ಕಳ್ಳರು ಕಳವು ನಡೆಸಿದ್ದಾರೆ.
ಕಳ್ಳರ ಕೈಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕಳ್ಳತನ ನಡೆಸುತ್ತಿರುವ ದೃಶ್ಯಗಳು ಕಂಡುಬಂದಿವೆ. ಈ ಸಂಬಂಧ ಮನ್ನಾಏಖ್ಖೇಳ್ಳಿ ಹಾಗೂ ಚಿಟಗುಪ್ಪಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

