ನವದೆಹಲಿ, ಏಪ್ರಿಲ್ 08: ಅಮೆರಿಕ ಮತ್ತು ಇರಾನ್ ನಡುವಿನ 14 ದಿನಗಳ ಕದನ ವಿರಾಮ ಘೋಷಣೆಯ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಭಾರೀ ಕುಸಿತ ಕಂಡಿವೆ. ಇಂದು ಬೆಳಿಗ್ಗೆ ತೈಲ ದರಗಳು ಸುಮಾರು 13% ರಿಂದ 17% ರಷ್ಟು ಇಳಿಕೆಯಾಗಿದ್ದು, ಕಳೆದ ಆರು ವರ್ಷಗಳಲ್ಲೇ ಒಂದೇ ದಿನದಲ್ಲಿ ಕಂಡ ಅತಿ ದೊಡ್ಡ ಕುಸಿತವಾಗಿದೆ.
ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಕಚ್ಚಾ ತೈಲದ ಬೆಲೆ ಸುಮಾರು 16.13 ಡಾಲರ್ (14.3%) ಇಳಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 96.82 ಡಾಲರ್ (ಸುಮಾರು ₹8,940) ತಲುಪಿದೆ. ಇದೇ ವೇಳೆ ಜಾಗತಿಕ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲದ ದರವು 14.84 ಡಾಲರ್ (13.6%) ಕುಸಿದು ಪ್ರತಿ ಬ್ಯಾರೆಲ್‌ಗೆ 94.43 ಡಾಲರ್ (ಸುಮಾರು ₹8,720) ಆಗಿದೆ.
ಈ ಘೋಷಣೆಗೆ ಮೊದಲು ಯುದ್ಧದ ಆತಂಕದ ಹಿನ್ನೆಲೆ ತೈಲದ ಬೆಲೆಗಳು ಪ್ರತಿ ಬ್ಯಾರೆಲ್‌ಗೆ 117 ರಿಂದ 120 ಡಾಲರ್‌ವರೆಗೆ (ಸುಮಾರು ₹11,000) ಏರಿಕೆಯಾಗಿದ್ದವು. ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ಒಪ್ಪಿಗೆ ನೀಡಿರುವುದು ಮಾರುಕಟ್ಟೆಯಲ್ಲಿದ್ದ ಆತಂಕವನ್ನು ಕಡಿಮೆ ಮಾಡಿದೆ.
ಜಗತ್ತಿನ ಸುಮಾರು 20% ತೈಲ ಪೂರೈಕೆ ಈ ಮಾರ್ಗದ ಮೂಲಕ ಸಾಗುವುದರಿಂದ ಪೂರೈಕೆ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆಯ ನಡುವೆ ಬೆಲೆ ಇಳಿಕೆಯಾಗಿದೆ.

