ರಾಜ್ಯದಲ್ಲಿ ಅನರ್ಹವಾಗಿ ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿರುವವರ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಬರೋಬ್ಬರಿ 10 ಲಕ್ಷ ಬಿಪಿಎಲ್ ಕಾರ್ಡ್‌ಧಾರರನ್ನು ಎಪಿಎಲ್ ಕಾರ್ಡ್‌ಗೆ ವರ್ಗಾವಣೆ ಮಾಡಲಾಗಿದೆ. ಈ ಕುರಿತ ವಿವರವನ್ನು ಆಹಾರ ಹಾಗೂ ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು ವಿಧಾನಮಂಡಲದ ಚಳಿಗಾಲದ ಅಧಿವೇಶನದ ವೇಳೆ ಮಾಹಿತಿ ನೀಡಿದರು.
ಸುವರ್ಣ ಸೌಧದಲ್ಲಿ ಪತ್ರಿಕಾ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, “ರಾಜ್ಯದಲ್ಲಿ ಅನೇಕರು ಅನರ್ಹರಾಗಿದ್ದರೂ ಬಿಪಿಎಲ್ ಕಾರ್ಡ್ ಹೊಂದಿದ್ದರು. ಪರಿಶೀಲನೆ ನಡೆಸಿ, ಸುಮಾರು 10 ಲಕ್ಷ ಮಂದಿಯನ್ನು ಎಪಿಎಲ್ ಕಾರ್ಡ್‌ಗೆ ಶಿಫ್ಟ್ ಮಾಡುತ್ತಿದ್ದೇವೆ,” ಎಂದು ಸ್ಪಷ್ಟಪಡಿಸಿದರು.
ಇನ್ನು ಎಪಿಎಲ್ ಕಾರ್ಡ್ ಸೌಲಭ್ಯಗಳ ಬಗ್ಗೆ ಮಾತನಾಡಿದ ಅವರು, “ಹಿಂದೆ ಎಪಿಎಲ್ ಕಾರ್ಡಿಗೆ ತಿಂಗಳಿಗೆ 15 ಕೆಜಿ ಅಕ್ಕಿ ನೀಡುತ್ತಿದ್ದೇವೆ. ಆದರೆ ಅವರು ಅಕ್ಕಿ ಪಡೆಯುವುದಿಲ್ಲವೆಂಬುದು ಕಂಡುಬಂದ ಕಾರಣ ಈ ಸೌಲಭ್ಯವನ್ನು ನಿಲ್ಲಿಸಿದ್ದೇವೆ. ಬೇಡಿಕೆ ಬಂದರೆ ಮತ್ತೆ ಅಕ್ಕಿ ಪೂರೈಕೆ ಮಾಡುವ ವಿಚಾರ ಪರಿಗಣಿಸಲಾಗುತ್ತದೆ. ಒಂದು ವರ್ಷದಿಂದ ಅಕ್ಕಿ ಪಡೆಯದವರ ಕಾರ್ಡ್‌ಗಳನ್ನು ಸಸ್ಪೆಂಡ್ ಮಾಡಲಾಗಿದೆ,” ಎಂದು ತಿಳಿಸಿದರು. ಸರ್ಕಾರದ ಈ ಕ್ರಮದಿಂದ ಬಿಪಿಎಲ್ ಪಟ್ಟಿಯ ಶುದ್ಧೀಕರಣಕ್ಕೆ ದಾರಿ ಮಾಡಿಕೊಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

