ಮೈಸೂರು : ಬಿಗ್‌ಬಾಸ್ ಮೂಲಕ ಜನಪ್ರಿಯತೆ ಗಳಿಸಿರುವ ರಜತ್ ಇದೀಗ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ. ಮೈಸೂರಿನ ಪಾರಂಪರಿಕ ಡಿಸಿ ಕಚೇರಿ ಮುಂಭಾಗದಲ್ಲಿ ಸಿಗರೇಟ್ ಸೇದುತ್ತ ಫೋಟೋಶೂಟ್ ಮಾಡಿಸಿಕೊಂಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಕಿಡಿಕಾರಿದ್ದಾರೆ.
ಈ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಮಚ್ಚು ಹಿಡಿದು ರೀಲ್ಸ್ ಮಾಡಿ ಜೈಲು ಪಾಲಾಗಿದ್ದ ರಜತ್, ಇದೀಗ ಮತ್ತೆ ಸಾರ್ವಜನಿಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೈಸೂರಿನ ಐತಿಹಾಸಿಕ ಕಟ್ಟಡದ ಮುಂದೆ ಸಿಗರೇಟ್ ಸೇದುತ್ತ ಫೋಟೋಶೂಟ್ ಮಾಡಿಸಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿದೆ.
ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ (COTPA) ಪ್ರಕಾರ ಸರಕಾರಿ ಕಚೇರಿ, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವ ವ್ಯವಸ್ಥೆಯಿದೆ.
ಮೈಸೂರಿನ ಕೃಷ್ಣರಾಜ ಬೌಲೆವಾರ್ಡ್‌ನಲ್ಲಿ ಇರುವ ಪಾರಂಪರಿಕ ಡಿಸಿ ಕಚೇರಿ (ಅಟ್ಟಾರಾ ಕಚೇರಿ) 129 ವರ್ಷಗಳ ಇತಿಹಾಸ ಹೊಂದಿದೆ. 1895ರಲ್ಲಿ ಚಾಮರಾಜ ಒಡೆಯರ್ ಅವರಿಂದ ನಿರ್ಮಿಸಲ್ಪಟ್ಟ ಈ ಇಂಡೋ–ಸಾರ್ಸೆನಿಕ್ ಶೈಲಿಯ ಐತಿಹಾಸಿಕ ಕಟ್ಟಡವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಯೋಜನೆಯೂ ಪ್ರಗತಿಯಲ್ಲಿದೆ ಎನ್ನಲಾಗಿದೆ. ಇಂತಹ ಮಹತ್ವದ ಪಾರಂಪರಿಕ ಕಟ್ಟಡದ ಮುಂದೆ ನಡೆದ ಈ ಘಟನೆ ಸಾರ್ವಜನಿಕರ ಆಕ್ರೋಶವನ್ನು ಇನ್ನಷ್ಟು ಹೆಚ್ಚಿಸಿದೆ.

