ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೂ ಮುನ್ನ ಬಹಿರಂಗ ಪ್ರಚಾರ ಅಂತ್ಯಗೊಳ್ಳಲು (ನ4) ಇನ್ನು ನಾಲ್ವೇ ದಿನ ಬಾಕಿ ಇರುವಾಗ, ಬಿಜೆಪಿ- ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟ ಪ್ರಣಾಳಿಕೆ ಬಿಡುಗಡೆ ಮಾಡಿದೆ. ತಮಗೆ ಮತ್ತೊಮ್ಮೆ ಅಧಿಕಾರ ಸಿಕ್ಕರೆ ಏನೆಲ್ಲ ಮಾಡಲಿದೆ ಎಂಬುದನ್ನು ವಿವರಿಸಿದೆ.
ಮಹಿಳೆಯರು ಮತ್ತು ಯುವ ಜನರನ್ನು ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆಯಲ್ಲಿ ಹಲವು ಭರವಸೆಗಳನ್ನು ನೀಡಲಾಗಿದೆ. ಪ್ರಸ್ತುತ ಚುನಾವಣೆಯ ಪ್ರಮುಖ ವಿಷಯವಾಗಿರುವ ‘ವಲಸೆ’ಗೆ ತಡೆಯೊಡ್ಡುವ ನಿಟ್ಟಿನಲ್ಲಿ, ಮುಂದಿನ ಐದು ವರ್ಷಗಳಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಘೋಷಿಸಲಾಗಿದೆ.
ಎದುರಾಳಿ ‘ಮಹಾಘಟಬಂಧನ್’ ಮೈತ್ರಿಕೂಟಕ್ಕೆ ಪ್ರತಿಯಾಗಿ ಶುಕ್ರವಾರ ‘ಸಂಕಲ್ಪ ಪತ್ರ’ ಹೆಸರಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿರುವ ಎನ್‌ಡಿಎ, ಒಗ್ಗಟು ಪ್ರದರ್ಶಿಸಿದೆ.
ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿ (ಯು) ಮುಖ್ಯಸ್ಥ ನಿತೀಶ್ ಕುಮಾರ್, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವರಾದ ಜೀತನ್ ರಾಮ್ ಮಾಂಝಿ (ಎಚ್‌ಎಎಂ), ಚಿರಾಗ್ ಪಾಸ್ವಾನ್ (ಎಲ್‌ಜಿಪಿ ಆರ್) ಮತ್ತು ಕೇಂದ್ರದ ಮಾಜಿ ಸಚಿವ ಉಪೇಂದ್ರ ಕುಶ್ವಾಹ (ಆರ್‌ಎಲ್‌ಎಂ) ಅವರು ಮಿತ್ರಪಕ್ಷಗಳ ಎಲ್ಲ ನಾಯಕರ ಸಮ್ಮುಖದಲ್ಲಿ ಪಟ್ನಾದಲ್ಲಿ ‘ಸಂಕಲ್ಪ ಪತ್ರ’ ಬಿಡುಗಡೆ ಮಾಡಿದ್ದಾರೆ.
ಸ್ವಂತ ವ್ಯವಹಾರ ನಡೆಸಲು ಬಯಸುವ ಮಹಿಳೆಯರಿಗೆ ₹ 10,000 ಸಹಾಯಧನ ನೀಡಲಾಗುವುದು. ಅದೇ ವ್ಯವಹಾರವನ್ನು ವಿಸ್ತರಿಸಿಕೊಳ್ಳಲು 12 ಲಕ್ಷದ ವರೆಗೂ ಹೆಚ್ಚುವರಿ ನೆರವು ಒದಗಿಸಲಾಗುವುದು. ಆ ಮೂಲಕ, ಕನಿಷ್ಠ ಒಂದು ಕೋಟಿ ಮಹಿಳೆಯರು ವಾರ್ಷಿಕ ಕಡಿಮೆಯೆಂದರೂ ಒಂದು ಲಕ್ಷ ರೂಪಾಯಿ ಸಂಪಾದಿಸುವಂತೆ ಮಾಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.
ಬಿಹಾರವನ್ನು ದಕ್ಷಿಣ ಏಷ್ಯಾದ ಜವಳಿ ಮತ್ತು ರೇಷ್ಮೆ ಕೇಂದ್ರವನ್ನಾಗಿಸುವ ಜೊತೆಗೆ, ಪ್ರತಿ ಜಿಲ್ಲೆಯಲ್ಲೂ ಹೊಸ ಕೈಗಾರಿಕೆಗಳು, ಕಾರ್ಖಾನೆಗಳನ್ನು ನಿರ್ಮಿಸುವುದಾಗಿ ಭರವಸೆ ನೀಡಲಾಗಿದೆ.
’50 ಲಕ್ಷ ಹೊಸ ಪಕ್ಕಾ ಮನೆಗಳನ್ನು ನಿರ್ಮಿಸುವುದಾಗಿ, ಪ್ರತಿ ಮನೆಗೂ 125 ಯೂನಿಟ್ವರೆಗೆ ವಿದ್ಯುತ್ ಪೂರೈಸುವುದಾಗಿ, ₹5 ಲಕ್ಷದವರೆಗೆ ಉಚಿತ ಚಿಕಿತ್ಸಾ ಸೌಲಭ್ಯ ಒದಗಿಸುವುದಾಗಿ ಎನ್‌ಡಿಎ ಸರ್ಕಾರ ಭರವಸೆ ನೀಡಿದೆ. ಇದಲ್ಲದೆ, ಸದ್ಯ ನೀಡುತ್ತಿರುವ ಸಾಮಾಜಿಕ ಭದ್ರತಾ ಪಿಂಚಣಿಯನ್ನು ಮಾಸಿಕ ₹ 400ರಿಂದ ₹ 1,100ಕ್ಕೆ ಹೆಚ್ಚಿಸಲಾಗುವುದು’ ಎಂದು ನಡ್ಡಾ ಹೇಳಿದ್ದಾರೆ.
ರೈತರನ್ನು ಆಕರ್ಷಿಸುವ ಪ್ರಯತ್ನಗಳನ್ನೂ ಮಾಡಲಾಗಿದೆ. ‘ರೈತರಿಗೆ ಸದ್ಯ ನೀಡುತ್ತಿರುವ ಸಹಾಯಧನದ ಜೊತೆಗೆ ‘ಕರ್ಪೂರಿ ಠಾಕೂರ್’ ಕಿಸಾನ್ ಸಮ್ಮಾನ್ ನಿಧಿ’ ಯೋಜನೆ ಅಡಿಯಲ್ಲಿ ಹೆಚ್ಚುವರಿಯಾಗಿ ₹3,000 ನೀಡಲಾಗುವುದು. ಇದರೊಂದಿಗೆ, ರೈತರಿಗೆ ನೀಡುವ ಆರ್ಥಿಕ ನೆರವಿನ ಮೊತ್ತ ₹ 6,000 ದಿಂದ ₹9.000ಕ್ಕೆ ಏರಿಕೆಯಾಗಲಿದೆ’ ಎಂದು ಬಿಹಾರ ಹಣಕಾಸು ಸಚಿವ, ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಘೋಷಿಸಿದ್ದಾರೆ.
‘ಈ ಸಂಕಲ್ಪ ಪತ್ರವು ಪ್ರಧಾನಿ ನರೇಂದ್ರ ಮೋದಿ ಅವರ ಗ್ಯಾರಂಟಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿಶ್ವಾಸದ ಪ್ರತೀಕ’ ಎಂದು ಬಿಹಾರ ಬಿಜೆಪಿ ಅಧ್ಯಕ್ಷ ದಿಲೀಪ್ ಜೈಸ್ವಾಲ್ ಪ್ರತಿಪಾದಿಸಿದ್ದಾರೆ.

