ಬೆಂಗಳೂರು: ಬಿಜೆಪಿ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, 1 ಕೋಟಿ ಸದಸ್ಯರನ್ನು ಮಾಡಿಸುವ ಗುರಿ ಹೊಂದಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿಯು ಜನಪರ ಪಕ್ಷ. ವಿಭಿನ್ನ ಸೇವಾಪರ ಪಕ್ಷ. 2047ರಲ್ಲಿ ಭಾರತವನ್ನು ವಿಕಸಿತ ರಾಷ್ಟ್ರವಾಗಿ, ಅಭಿವೃದ್ಧಿ ಹೊಂದಿದ ದೇಶವಾಗಿ ಮಾಡುವ ಕನಸು ಪ್ರಧಾನಿಯವರಾಗಿದ್ದಾರೆ. ಆದರೆ, ರಾಜ್ಯದ ಜನರು ಇನ್ನೂ ಅವರ ಕೈ ಬಲಪಡಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ.
ಕಳೆದ ಬಾರಿ 1.04 ಕೋಟಿ ಸದಸ್ಯರ ನೋಂದಣಿ ಆಗಿತ್ತು. ಈ ಬಾರಿ ಇನ್ನೂ ಹೆಚ್ಚು ಸದಸ್ಯರನ್ನು ನೋಂದಣಿ ಮಾಡಲಾಗುವುದು. ಎಲ್ಲ ಜನಪ್ರತಿನಿಧಿಗಳು, ಕಾರ್ಯಕರ್ತರು ಭಾಗವಹಿಸುತ್ತಾರೆ ಎಂದು ಹೇಳಿದ್ದಾರೆ.
ಅಭಿಯಾನದ ಯಶಸ್ವಿಗಾಗಿ ಪ್ರತಿ ಬೂತ್ ಗಳಲ್ಲಿ ಕಾರ್ಯಕರ್ತರನ್ನು ನೇಮಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ಬಿಜೆಪಿಯು ಜನಪರ ಕಾರ್ಯ ಮಾಡಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ, ಮುಖಂಡರು, ಕಾರ್ಯಕರ್ತರು ಆಹಾರದ ಕಿಟ್ ನೀಡುವುದು ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ಉಚಿತ ಔಷಧಿ, ಮಾತ್ರೆ ಕೊಡುವ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.

