ಮಂಡ್ಯ: ಅನಾಮಿಕ ವ್ಯಕ್ತಿಯೊಬ್ಬ ಧರ್ಮಸ್ಥಳದಲ್ಲಿ ಶವಗಳನ್ನು ಹೂತುಹಾಕಿರುವುದಾಗಿ ಹೇಳಿದ್ದ ಪ್ರಕರಣವನ್ನ ರಾಜ್ಯ ಸರ್ಕಾರ ಎಸ್‌ಐಟಿಗೆ ವಹಿಸಿತ್ತು. ಈ ವಿಚಾರ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸಂಚಲನ ಮಾಡಿತ್ತು. ಈ ಬಗ್ಗೆ ರಾಜಕೀಯ ನಾಯಕರು ಸಹ ವಿವಿಧ ರೀತಿಯ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಅದರಲ್ಲೂ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಈ ವಿಚಾರವಾಗಿ ವಾಗ್ವಾದಗಳು ನಡೆಯುತ್ತಿದ್ದು, ಇದೀಗ ಕೃಷಿ ಸಚಿವ ಚಲುವರಾಯಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿಯವರು ಈಗ ಏನೇನೋ ಮಾಡುತ್ತಿದ್ದಾರೆ. ಎಸ್‌ಐಟಿ ರಚನೆಯಿಂದ ಅನೇಕ ವಿವರಗಳು ಹೊರಗೆ ಬಂದಿದೆ. ಈಗ ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿಯವರಿಗೆ ದೊಡ್ಡ ಮುಖಭಂಗವಾಗಿದೆ. ಈಗ ಈ ವಿಚಾರವಾಗಿ ಮಾತನಾಡಲು ಬಂದಿದ್ದಾರೆ. ಕಾನೂನು ರೀತಿಯಾಗಿ ಕ್ರಮಗಳನ್ನ ತೆಗೆದುಕೊಳ್ಳಬೇಕು ಎಂದು ಈಗ ವಿಜಯೇಂದ್ರ, ಅಶೋಕ್ ಹೇಳುತ್ತಿದ್ದಾರೆ. ಆದರೆ ಕಳೆದ ಹತ್ತಾರು ವರ್ಷಗಳಿಂದ ಸೌಜನ್ಯ ಪ್ರಕರಣದ ಹೋರಾಟ ನಡೆಯುತ್ತಿದೆ. ಆ ಸಮಯದಲ್ಲಿ ಈ ನಾಯಕರು ಎಲ್ಲಿ ಹೋಗಿದ್ದರು. ಎರಡು ವರ್ಷದ ಹಿಂದೆ ಬಿಜೆಪಿಯವರದ್ದೇ ಸರ್ಕಾರ ಇತ್ತು. ಅದರಲ್ಲೂ ಸೌಜನ್ಯ ಪ್ರಕರಣ ನಡೆದಾಗ ಅಶೋಕ್ ಅವರೇ ಗೃಹ ಸಚಿವರಾಗಿದ್ದರು. ಆ ಸಮಯದಲ್ಲಿಯೇ ಸರಿಯಾದ ತನಿಖೆ ಮಾಡಬಹುದಿತ್ತು. ಆದರೆ ಈಗ ಮಾತನಾಡುತ್ತಾರೆ. ಇವರಿಗೆ ಧರ್ಮಸ್ಥಳದ ಬಗ್ಗೆ ಮಾತನಾಡಲು ಬಿಟ್ಟಿದ್ದು ದೊಡ್ಡ ಅಪರಾಧ ಎಂದು ಕೆಂಡ ಕಾರಿದ್ದಾರೆ.
ಸರ್ಕಾರ ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ಪ್ರಕರಣಗಳನ್ನ ತನಿಖೆ ಮಾಡಲು ಎಸ್‌ಐಟಿ ರಚನೆ ಮಾಡಿದಾಗ ಬಾಯಿ ಮುಚ್ಚಿಕೊಂಡು ಇದ್ದರು. ಈಗ ಅದರ ಲಾಭ ಪಡೆಯೋದಕ್ಕೆ ಮುಂದೆ ಬಂದಿದ್ದಾರೆ. ಯಾವಾಗ ನಮ್ಮ ಸಿಎಂ ಹಾಗೂ ಡಿಸಿಎಂ ಈ ಪ್ರಕರಣದಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದರೋ ಆಗ ಬಿಜೆಪಿಯವರು ಸಹ ಮುಂದೆ ಬಂದಿದ್ದಾರೆ. ಎಸ್‌ಐಟಿ ರಚನೆ ಮಾಡುವ ಮೂಲಕ ನಮ್ಮ ಸರ್ಕಾರ ಸತ್ಯವನ್ನ ಜನರಿಗೆ ತೋರಿಸಿದೆ. ಇನ್ನು ಮುಂದೆ ಆದರೂ ಬಿಜೆಪಿಯವರು ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡುವುದನ್ನ ಬಿಟ್ಟರೆ ಒಳ್ಳೆಯದು. ಬಿಜೆಪಿ ಅವರ ಕೈನಲ್ಲಿ ಏನೂ ಆಗ್ತಿಲ್ಲ. ಅವರನ್ನ ಕಂಡರೆ ನನಗೆ ಅಯ್ಯೋ ಅನಿಸುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ಧರ್ಮಸ್ಥಳ ಪ್ರಕರಣದಲ್ಲಿ ಮಾಸ್ಕ್ ಮ್ಯಾನ್ ಬಂಧಿಸಿರುವ ಬಗ್ಗೆ ಬೆಂಗಳೂರಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರಾಮಲಿಂಗಾ ರೆಡ್ಡಿ, ಬಹಳ ವರ್ಷಗಳಿಂದ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಹಾಗೂ ಧರ್ಮಾಧಿಕಾರಿಗಳ ಬಗ್ಗೆ ಸಹ ಅನೇಕ ವಿಚಾರಗಳು ಸುದ್ದಿಯಾಗಿದ್ದವು. ದೊಡ್ಡ ಮಟ್ಟದಲ್ಲಿ ಚರ್ಚೆ ಸಹ ಆಗಿತ್ತು. ಆಗಿನಿಂದಲೂ ಯೂಟ್ಯೂಬರ್ಸ್ ಕೂಡ ಮಾತನಾಡುತ್ತಿದ್ದರು ಹಾಗೂ ವಿಡಿಯೋ ಸಹ ಮಾಡಲಾಗಿತ್ತು. ಆಗಲೂ ಎಲ್ಲರೂ ಧರ್ಮಕ್ಕೆ ಸೇರಿದವರೇ ಆಗಿದ್ದಾರೆ. ಈಗ ಬಿಜೆಪಿ ಅವರು ಈ ವಿಚಾರವಾಗಿ ದೊಡ್ಡದಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

