ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ (Lok Sabha Election) ಮಂಡ್ಯ (Mandya) ಸಂಸದರಾಗಿ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಆಯ್ಕೆಯಾದ ಬೆನ್ನಲ್ಲೇ ಚನ್ನಪಟ್ಟಣ ಉಪ ಚುನಾವಣೆಗೆ (Channapatna By Election) ಮೈತ್ರಿ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಕುತೂಹಲ ಈಗ ಮನೆ ಮಾಡಿದೆ.
ಕುಮಾರಸ್ವಾಮಿ ಅವರು ವಿಧಾನಸಭಾ ಚುನಾವಣೆಯಲ್ಲಿ (Vidahna Sabha Election) ರಾಮನಗರ (Ramanagara) ಮತ್ತು ಚನ್ನಪಟ್ಟಣದಿಂದ ಸ್ಪರ್ಧಿಸಿದ್ದರು. ರಾಮನಗರದಲ್ಲಿ ಸೋತು ಚನ್ನಪಟ್ಟಣದಿಂದ ಗೆದ್ದಿದ್ದರು. ಈಗ ಲೋಕಸಭಗೆ ಆಯ್ಕೆಯಾಗಿರುವ ಕಾರಣ ಚನ್ನಪಟ್ಟಣ ಕ್ಷೇತ್ರಕ್ಕೆ ಕುಮಾರಸ್ವಾಮಿ ರಾಜೀನಾಮೆ ನೀಡಬೇಕಾಗುತ್ತದೆ. ಇದನ್ನೂ ಓದಿ: 3 ನೇ ಬಾರಿ ಪ್ರಧಾನಿಯಾಗಿ ಮೋದಿ ಜೂ.9 ರಂದು ಪ್ರಮಾಣ ವಚನ

ಲೋಕಸಭೆ ಮತ್ತು ಪರಿಷತ್ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ (BJP-JDS) ಮೈತ್ರಿ ಯಶಸ್ವಿಯಾದ ಬೆನ್ನಲ್ಲೇ ಚನ್ನಪಟ್ಟಣದಲ್ಲೂ ಮೈತ್ರಿ ಅಭ್ಯರ್ಥಿ ಕಣಕ್ಕೆ ಇಳಿಯಲಿದ್ದಾರೆ. ಮೈತ್ರಿ ಫಿಕ್ಸ್ ಆಗುತ್ತಿದ್ದಂತೆ ಮಾಜಿ ಶಾಸಕ ಯೋಗೇಶ್ವರ್ (CP Yogeshwar )ಟಿಕೆಟ್ ಪಡೆಯಲು ನಾನಾ ಕಸರತ್ತು ಆರಂಭಿಸಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಹೆಚ್‌ಡಿಕೆ ವಿರುದ್ಧವೇ ಸೋತಿದ್ದ ಯೋಗೇಶ್ವರ್ ಗುರುವಾರ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಹಾಗೆ ನೋಡಿದರೆ ಡಿಕೆ ಸುರೇಶ್ (DK Suresh) ವಿರುದ್ಧ ಬೆಂಗಳೂರು ಗ್ರಾಮಾಂತರದಲ್ಲಿ ಸ್ಪರ್ಧಿಸಲು ಯೋಗೇಶ್ವರ್ ಆಸೆ ವ್ಯಕ್ತಪಡಿಸಿದ್ದರು. ಆದರೆ ಬಿಜೆಪಿ ವರಿಷ್ಠ ಸೂಚನೆ ಮೇರೆಗೆ ಕ್ಷೇತ್ರವನ್ನು ಬಿಡಲು ಒಪ್ಪಿಗೆ ನೀಡಿದ್ದರು.ಇದನ್ನೂ ಓದಿ: ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ – ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗೆಲುವು
ಲೋಕಸಭಾ ಚುನಾವಣೆಯಲ್ಲಿ ಡಾ.ಮಂಜುನಾಥ್ ಅವರನ್ನು ಗೆಲ್ಲಿಸಲು ಯೋಗೇಶ್ವರ್ ಚನ್ನಪಟ್ಟಣದಲ್ಲಿ ಕೆಲಸ ಮಾಡಿದ್ದರು. ಚನ್ನಪಟ್ಟಣದಲ್ಲಿ ಮಂಜುನಾಥ್ (Dr Manjunath) ಅವರಿಗೆ 1,06,971 ಮತಗಳು ಬಿದ್ದಿದ್ದರೆ ಡಿಕೆ ಸುರೇಶ್ ಅವರಿಗೆ 85,357 ಮತಗಳು ಬಿದ್ದಿತ್ತು. ಚನ್ನಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವುದು ತಿಳಿದು ಬಂದಿಲ್ಲ. ಈಗಾಗಲೇ ಬೆಂಗಳೂರು ಗ್ರಾಮಾಂತರದ ಸೋಲನ್ನು ಡಿಕೆ ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಈ ಕಾರಣಕ್ಕೆ ಡಿಕೆ ಸುರೇಶ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬಹುದು ಎಂಬ ಮಾತು ಕೇಳಿ ಬರುತ್ತಿದೆ.
ಲೋಕಸಭೆ, ಪರಿಷತ್‌ನಲ್ಲಿ ಜೆಡಿಎಸ್‌ಗೆ ಕ್ಷೇತ್ರವನ್ನು ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಎದುರಿಸಲು ನನಗೆ ಟಿಕೆಟ್ ಸಿಗಬಹುದು ಎಂಬ ವಿಶ್ವಾಸದಲ್ಲಿ ಯೋಗೇಶ್ವರ್ ಇದ್ದಾರೆ. ಎನ್‌ಡಿಎ ಸರ್ಕಾರದ ಪ್ರಮಾಣವಚನ ಕಾರ್ಯಕ್ರಮದ ಬಳಿಕ ಮೈತ್ರಿ ಅಭ್ಯರ್ಥಿ ಯಾರಾಗಬಹುದು ಎನ್ನುವುದು ಅಧಿಕೃತವಾಗಿ ಪ್ರಕಟವಾಗಲಿದೆ. ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆಗೆ ಅವಿರೋಧವಾಗಿ 11 ಅಭ್ಯರ್ಥಿಗಳು ಆಯ್ಕೆ