ವಿವಾಹ ವಿಚ್ಛೇದನ ಕಲಾಪ ನಡೆಯುತ್ತಿದ್ದಾಗ ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ಸ್ವೀಟಿ ಬೂರ ಎಲ್ಲರ ಎದುರಲ್ಲೇ ತನ್ನ ಗಂಡನ ಮೇಲೆ ಹಲ್ಲೆ ನಡೆಸಿರುವುದು ಕ್ಯಾಮರದಲ್ಲಿ ಸೆರೆಯಾಗಿದೆ.
ಗಂಡ, ಕಬಡ್ಡಿ ಆಟಗಾರ ದೀಪಕ್ ನಿವಾಸ್ ಹೂಡ ವರದಕ್ಷಿಣೆ ತರುವಂತೆ ಒತ್ತಾಯಿಸಿ ತನಗೆ ಕಿರುಕುಳ ನೀಡುತ್ತಿದ್ದಾರೆ ಮತ್ತು ಹಲ್ಲೆ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ಬೂರಾ, ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು.
ಪೊಲೀಸ್ ಠಾಣೆಯಲ್ಲಿ ಮಾತುಕತೆ ನಡೆಯುತ್ತಿದ್ದಾಗ, ಬೂರಾ ಒಮ್ಮೆಲೇ ಎದ್ದು ಹೂಡಾರತ್ತ ಧಾವಿಸಿ ಅವರ ಕತ್ತು ಹಿಡಿಯುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೊ ತೋರಿಸುತ್ತದೆ. ಆಗ ಕುಟುಂಬ ಸದಸ್ಯರು ಮಧ್ಯಪ್ರವೇಶಿಸಿ ಬೂರಾರನ್ನು ಹಿಂದಕ್ಕೆ ಎಳೆದು ತಂದರು.
ಆದರೆ, ಗಂಡನನ್ನು ಆಕ್ರೋಶದಿಂದ ಬೈಯುವುದನ್ನು ಅವರು ಮುಂದುವರಿಸಿದರು. ಇತರರು ಹಿಡಿದಿಟ್ಟರೂ ಅವರು ಮತ್ತೆ ಮತ್ತೆ ಗಂಡನಿಗೆ ಹೊಡೆಯಲು ಧಾವಿಸುತ್ತಿರುವುದು ಕಂಡುಬಂತು.ಏಶ್ಯಾಡ್ ಕಂಚು ವಿಜೇತ ಕಬಡ್ಡಿ ಆಟಗಾರ ದೀಪಕ್ ಹೂಡ ವಿರುದ್ಧ ಬೂರಾ ವರದಕ್ಷಿಣೆ ಕಿರುಕುಳ ದೂರು ನೀಡಿದ್ದರು.
ಹೂಡ ಮತ್ತು ಅವರ ಕುಟುಂಬ ಸದಸ್ಯರು ವರದಕ್ಷಿಣೆ ತರುವಂತೆ ಬಲವಂತಪಡಿಸಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದರು.