ವಾಷಿಂಗ್ಟನ್: ರಷ್ಯಾ-ಉಕ್ರೇನ್ ಯುದ್ಧವನ್ನು ಮೋದಿ ಯುದ್ಧಎಂದು ಕರೆದಿದ್ದ ಡೊನಾಲ್ಡ್ ಟ್ರಂಪ್ ವ್ಯಾಪಾರ ಸಲಹೆಗಾರ ಪೀಟರ್ ನವರೊ ಈಗ ಭಾರತದವರನ್ನು ಪ್ರಚೋದಿಸಲು ಜಾತಿ ಅಸ್ತ್ರವನ್ನು ಪ್ರಯೋಗಿಸಿದ್ದಾರೆ.
ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಮೂಲಕ ಬ್ರಾಹ್ಮಣರು ಭಾರತೀಯ ಜನರ ವೆಚ್ಚದಲ್ಲಿ ಶ್ರೀಮಂತರಾಗುತ್ತಿದ್ದಾರೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಚೀನಾದ ಟಿಯಾಂಜಿನ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಶೃಂಗಸಭೆಯಲ್ಲಿ ಮೋದಿ, ಪುಟಿನ್, ಕ್ಸಿ ಜಿನ್‌ಪಿಂಗ್ ಮಾತುಕತೆ ನಡೆಸುತ್ತಿರುವ ಮಹತ್ವದ ಸಮಯದಲ್ಲೇ ಈ ಹೇಳಿಕೆ ಬಂದಿರುವುದು ವಿಶೇಷ.
ಟಿವಿ ವಾಹಿನಿಯ ಜೊತೆ ಮಾತನಾಡಿದ ಪೀಟರ್ ನವರೊ, ಮೋದಿ ಒಬ್ಬ ಮಹಾನ್ ನಾಯಕ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವಾಗ ಅವರು ಪುಟಿನ್ ಮತ್ತು ಕ್ಸಿ ಜಿನ್‌ಪಿಂಗ್ ಜೊತೆ ಯಾಕೆ ಮಾತನಾಡುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ. ನಾನು ಭಾರತೀಯ ಜನರಿಗೆ ಹೇಳುತ್ತೇನೆ, ದಯವಿಟ್ಟು ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಭಾರತೀಯ ಜನರ ವೆಚ್ಚದಲ್ಲಿ ಬ್ರಾಹ್ಮಣರು ಲಾಭ ಗಳಿಸಿ ಶ್ರೀಮಂತರಾಗುತ್ತಿದ್ದಾರೆ. ಇದನ್ನು ನಾವು ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ತನ್ನ ಒತ್ತಡಕ್ಕೆ ಭಾರತ ಬಗ್ಗದೇ ಸೆಡ್ಡು ಹೊಡೆದ ಬೆನ್ನಲ್ಲೇ ಹತಾಶೆಗೊಂಡಿರುವ ಟ್ರಂಪ್ ಸರ್ಕಾರದ ಅಧಿಕಾರಿಗಳು ಈಗ ನರೇಂದ್ರ ಮೋದಿ ವಿರುದ್ಧ ಬಾಯಿಗೆ ಬಂದಂತೆ ಹೇಳಿಕೆ ನೀಡಲು ಆರಂಭಿಸಿದ್ದಾರೆ.

