ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸತತ ಮಳೆಯಿಂದ ಸರಣಿ ಅವಘಡಗಳು ಸಂಭವಿಸಿದ್ದು ಕೆಂಗೇರಿಯ ಬಳಿ ಕೆರೆಯಿಂದ ನೀರು ತರಲು ತೆರಳಿದ್ದ ಅಣ್ಣ ತಂಗಿ ಪ್ರಾಣ ಕಳೆದುಕೊಂಡಿದ್ದು, ಹಲವು ಗಂಟೆಗಳ ಕಾರ್ಯಾಚರಣೆಯ ನಂತರ ಸೀನ ಮತ್ತು ಮಹಾಲಕ್ಷ್ಮಿ ಇಬ್ಬರ ಮೃತದೇಹಗಳು ಪತ್ತೆಯಾಗಿದೆ.
ನಿನ್ನೆ ಸಂಜೆ ಕೆರೆಯಿಂದ ನೀರು ತರುವುದಾಗಿ ಹೇಳಿ ಹೊರಟ ಅಣ್ಣ ತಂಗಿ ಕೆರೆಯ ಬಳಿ ಬಂದಾಗ ಮಳೆಯ ಪರಿಣಾಮ ನೀರಿನ ಹರಿವು ಹೆಚ್ಚಾಗಿದ್ದು, ನೀರು ತುಂಬಿಕೊಳ್ಳುವಾಗ ಆಯತಪ್ಪಿ ಇಬ್ಬರೂ ಕೆರೆಯಲ್ಲಿ ಬಿದ್ದಿದ್ದಾರೆ ಎನ್ನಲಾಗಿದೆ. ಎಷ್ಟು ತಡವಾದ್ರೂ ಮಕ್ಕಳು ಮರಳಿ ಬಾರದೆಯಿದ್ದಾಗ ಆತಂಕಗೊಂಡ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಮತ್ತು ಅಗ್ನಿ ಶಾಮಕ ದಳ ಸಿಬ್ಬಂದಿ ಇಂದು ಬೆಳಿಗ್ಗೆಯಿಂದ ಶೋಧ ಕಾರ್ಯ ಆರಂಭಿಸಿದ್ದರು. ಮೊದಲಿಗೆ ಸಹೋದರ ಸೀನನ ಮೃತದೇಹ ಬೆಳಿಗ್ಗೆ 11 ಗಂಟೆ ಸುಮಾರಿಗೆ ಪತ್ತೆಯಾಗಿತ್ತು. ಮಹಾಲಕ್ಷಿಯ ಮೃತದೇಹಕ್ಕಾಗಿ ಸಿಬ್ಬಂದಿ ನಿರಂತರ ಹುಡುಕಾಟ ನಡೆಸಿದ್ದರು.
ಬೋಟ್ ಗಳ ಸಹಾಯದಿಂದ ಹಲವು ಗಂಟೆಗಳ ಕೆರೆಯನ್ನು ಸಂಪೂರ್ಣವಾಗಿ ಶೋಧಿಸಿದ ನಂತರ ತಂಗಿ ಮಹಾಲಕ್ಷ್ಮೀಯ ಮೃತದೇಹ ಪತ್ತೆಯಾಗಿದ್ದು, ಸಹೋದರ ಸೀನನ ದೇಹ ಸಿಕ್ಕ ಕೇವಲ 100 ಮೀಟರ್ ಅಂತರದಲ್ಲಿ ತಂಗಿಯ ಮೃತದೇಹ ಕೂಡ ಪತ್ತೆಯಾಗಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.