Dharmasthala : ಧರ್ಮಸ್ಥಳದ ಕಾಡಿನಲ್ಲಿ ಶವ ಹೂತಿಟ್ಟ ಪ್ರಕರಣವು ಕ್ಷಣಕ್ಷಣಕ್ಕೂ ರೋಚಕತೆಯನ್ನು ಪಡೆದುಕೊಳ್ಳುತ್ತಿದೆ. ಇಂದಿನ ಶೋಧ ಕಾರ್ಯದಲ್ಲಿ ಮೂಳೆಗಳು ಪತ್ತೆಯಾಗಿದ್ದು, ಹೀಗಾಗಿ ಉತ್ಖನನ ಕಾರ್ಯ ಬಿರುಸಿನಿಂದ ನಡೆಯುತ್ತಿದೆ.
ಕಳೆದ ಎರಡು ದಿನಗಳಿಂದ ಶೋಧ ಕಾರ್ಯ ನಡೆಯುತ್ತಿದ್ದರೂ ಐಡಿ ಕಾರ್ಡ್, ರವಿಕೆ ಸಿಕಿದ್ದರೂ ಮೃತದೇಹದ ಅವಶೇಷಗಳು ಸಿಕ್ಕಿರಲಿಲ್ಲ. ಹೀಗಾಗಿ ಹೆಚ್ಚಿನ ಮಾಹಿತಿಗಾಗಿ ಎಸ್‌ಐಟಿ ಅಧಿಕಾರಿಗಳು ಸಹಾಯವಾಣಿ ಕೂಡ ತೆರೆದಿದ್ದರು.
ಇದೀಗ ಇಂದಿನ ಉತ್ಖನನ ಕಾರ್ಯದ ವೇಳೆ ಅನಾಮಿಕ ಗುರುತಿಸಿದ ಆರನೇ ಸ್ಪಾಟ್‌ನಲ್ಲಿ ಮೂಳೆಗಳು ಪತ್ತೆಯಾಗಿದ್ದವು. ಹೀಗಾಗಿ ಎಸ್ಐಟಿಯಿಂದ ಅಸ್ಥಿಪಂಜರ ಶೋಧ ಕಾರ್ಯ ತೀವ್ರಗೊಂಡಿದ್ದು, ಸ್ಪಾಟ್ ನಂಬರ್ 6 ರಲ್ಲಿಯೇ ಮತ್ತಷ್ಟು ಮೂಳೆಗಳು ಪತ್ತೆಯಾಗಿವೆ. ಹಾಗೂ ತಲೆಬುರುಡೆಯ ಒಂದು ಮೂಳೆ ಕೂಡ ಸಿಕ್ಕಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಸುಮಾರು 5 ಅಡಿ ಆಳಕ್ಕೆ ಅಗೆದಾಯ ಹಲವು ಮೂಳೆಗಳು ಪತ್ತೆಯಾಗಿವೆ. ಈ ಮೂಳೆಗಳನ್ನು ಎಫ್ಎಸ್ಎಲ್ ಟೀಂ ವಶಕ್ಕೆ ಪಡೆದುಕೊಂಡಿದೆ ಎನ್ನಲಾಗಿದ್ದು, ಸದ್ಯ ಉತ್ಖನನ ಕಾರ್ಯ ಮುಂದುವರಿದಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಈಗ ಸಿಕ್ಕಿರುವುದು ಪುರಷನ ಮೂಳೆ ಎನ್ನಲಾಗುತ್ತಿದೆ. ಇದಲ್ಲದೇ ನಿನ್ನೆ ಪತ್ತೆಯಾದ ಪ್ಯಾನ್ ಕಾರ್ಡ್ ಓರ್ವ ಪುರುಷನದ್ದು ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ ಬಳಿಕವೇ ಸ್ಪಷ್ಟವಾಗಬೇಕಿದೆ.
ಐಡಿ ಕಾರ್ಡ್, ರವಿಕೆ ಸಿಕ್ಕಿದ್ದರ ಬಗ್ಗೆ ಎಸ್‌ಐಟಿ ಹೇಳಿದ್ದೇನು..?: ಮೊದಲ ದಿನದ ಕಾರ್ಯಾಚರಣೆಯಲ್ಲಿ 1 ನೇ ಪಾಯಿಂಟ್‌ನಲ್ಲಿ ಯಾವುದೇ ಕಳೇಬರ ಪತ್ತೆಯಾಗಿರಲಿಲ್ಲ. ಆದರೆ, ಒಂದನೇ ಸ್ಪಾಟ್‌ನಲ್ಲಿ ಎರಡು ಐಡಿ ಕಾರ್ಡ್‌ಗಳು ಸಿಕ್ಕಿವೆ ಎಂದು ಧರ್ಮಸ್ಥಳದಿಂದ ಕಾಣೆಯಾಗಿದ್ದಾರೆ ಎನ್ನಲಾದ ಅನನ್ಯ ಭಟ್ ತಾಯಿ ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಪವಿತ್ರಾ ಪ್ರಕಟಣೆ ಬಿಡುಗಡೆ ಮಾಡಿದ್ದರು. ಆದರೆ, ವಕೀಲ ಮಂಜುನಾಥ್ ಹೇಳಿಕೆಯನ್ನು ಎಸ್‌ಐಟಿ ಟೀಂ ಸಂಪೂರ್ಣವಾಗಿ ತಳ್ಳಿಹಾಕಿದೆ.
ಸುಜಾತಾ ಭಟ್ ಪರ ವಕೀಲರಾದ ಮಂಜುನಾಥ್, ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡುವ ಮೂಲಕ ಮೊದಲನೇ ಸ್ಪಾಟ್‌ನಲ್ಲಿ ಒಂದು ಕೆಂಪು ರವಿಕೆ, ಒಂದು ಪ್ಯಾನ್ ಕಾರ್ಡ್ ಹಾಗೂ ಒಂದು ಡೆಬಿಟ್ ಕಾರ್ಡ್ ಸಿಕ್ಕಿತ್ತು ಎಂದಿದ್ದರು.
ಎಸ್‌ಐಟಿ ಖಚಿತಪಡಿಸುವ ಮೊದಲೇ ಮಂಜುನಾಥ್ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆ ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿತ್ತು. ಅಲ್ಲದೇ ಮಂಜುನಾಥ್ ಪತ್ರಿಕಾ ಪ್ರಕಟಣೆಯಲ್ಲಿನ ಮಾಹಿತಿಯನ್ನು SIT ಅಲ್ಲಗಳೆದಿದೆ.
ಮೊದಲ ನಾಲ್ಕು ಸ್ಪಾಟ್‌ಗಳಲ್ಲಿ ಯಾವುದೇ ಕಳೇಬರ ಸಿಕ್ಕಿರಲಿಲ್ಲ. ಎಸ್‌ಐಟಿ ಸಿಬ್ಬಂದಿ 5ನೇ ಸ್ಪಾಟ್‌ನಲ್ಲಿ ಕೂಡ ಹುಡುಕಿದರೂ ಯಾವುದೇ ಕಳೆಬರದ ಕುರುಹುಗಳು ಪತ್ತೆಯಾಗಿಲ್ಲ. ಎಸ್‌ಐಟಿ ತಂಡ ಒಂದೊಂದು ಸ್ಪಾಟ್‌ನಲ್ಲೂ 6 ಅಡಿಗಳಷ್ಟು ಅಗೆದು ಕಳೇಬರದ ಕುರುಹವನ್ನು ಹುಡುಕಾಟ ನಡೆಸಿದ್ದಾರೆ. ಆರಂಭದಲ್ಲಿ ಮನುಷ್ಯರಿಂದ ಹುಡುಕಾಟ ನಡೆಸಿ ಬಳಿಕ ಹಿಟಾಚಿ ಮೂಲಕ ಅಕ್ಕಪಕ್ಕದ ಸ್ಥಳದಲ್ಲಿ ಹುಡುಕಾಟ ಮಾಡಲಾಯಿತು.

