ನವದೆಹಲಿ : ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಶುಕ್ರವಾರ(ಸೆ.12) ನಡೆದ ಸಮಾರಂಭದಲ್ಲಿ ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್ ಅವರು ಭಾರತದ 15ನೇ ಉಪರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.ಗಣ್ಯರ ಸಮ್ಮುಖದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಧಾಕೃಷ್ಣನ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಜಗದೀಪ್ ಧನಕರ್ ಅವರ ದಿಢೀರ್ ರಾಜೀನಾಮೆಯಿಂದ ತೆರವಾಗಿದ್ದ ಹುದ್ದೆಗೆ ಮಂಗಳವಾರ (ಸೆ.9) ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ರಾಧಾಕೃಷ್ಣನ್, ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ ಬಿ.ಸುದರ್ಶನ ರೆಡ್ಡಿ ಅವರನ್ನು ಮಣಿಸಿದ್ದರು.
ಸೆಪ್ಟೆಂಬರ್ 9 ರಂದು ನಡೆದ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಮಹಾರಾಷ್ಟ್ರ ರಾಜ್ಯಪಾಲಾರಾಗಿದ್ದ ಸಿಪಿ ರಾಧಾ ಕೃಷ್ಣನ್ ವಿರುದ್ಧ ಇಂಡಿಯಾ ಮೈತ್ರಿ ಒಕ್ಕೂಟದ ಅಭ್ಯರ್ಥಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ ಸುದರ್ಶನ ರೆಡ್ಡಿ ಸ್ಪರ್ಧಿಸಿದ್ದರು. ಎನ್‌ಡಿಎ ಮೈತ್ರಿ ಪಕ್ಷಗಳ ಸದಸ್ಯರು ರಾಧಾಕೃಷ್ಣನ್‌ಗೆ ಮತ ಹಾಕಿದ್ದರೆ, ಇಂಡಿಯಾ ಒಕ್ಕೂಟದ ಸದಸ್ಯರು ಅಡ್ಡ ಮತದಾನ ಮಾಡಿದ್ದರು.
ಈ ಮೂಲಕ 752 ಒಟ್ಟು ಮತಗಳ ಪೈಕಿ 452 ಮತ ಪಡೆದು ಗೆಲುವು ಸಾಧಿಸಿದ್ದರು. 152 ಮತಗಳ ಅಂತರದಲ್ಲಿ ಸಿಪಿ ರಾಧಾಕೃಷ್ಣನ್ ಗೆಲುವು ಸಾಧಿಸಿದ್ದರು. ವಿರೋಧ ಪಕ್ಷದ ಅಭ್ಯರ್ಥಿ ಮತ್ತು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಬಿ. ಸುದರ್ಶನ್ ರೆಡ್ಡಿ 300 ಮತಗಳನ್ನು ಪಡೆದ್ದರು.

