ಬೆಂಗಳೂರು : ರಾಜಕೀಯ ವಲಯದಲ್ಲಿ ಮತ್ತೆ ಚಟುವಟಿಕೆ ಹೆಚ್ಚಾಗಿದ್ದು, ಸಂಪುಟ ಪುನರ್رಚನೆ ಕುರಿತ ಗೊಂದಲ ಮತ್ತೊಮ್ಮೆ ತಾರಕಕ್ಕೇರಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಹೈಕಮಾಂಡ್ ತುರ್ತು ಸಭೆಗೆ ದೆಹಲಿಗೆ ಕರೆಸಿರುವುದು ಈಗ ಬಹುದೊಡ್ಡ ರಾಜಕೀಯ ಸೂಚನೆ ಆಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚಿಸಿದ ಕೆಲವೇ ಗಂಟೆಗಳ ಬಳಿಕ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಡಿಕೆಶಿಗೆ ನೇರವಾಗಿ ಬುಲಾವ್ ನೀಡಿರುವ ಮಾಹಿತಿ ಹೊರಬಿದ್ದಿದೆ. ಇದರಿಂದ ಪಕ್ಷದೊಳಗಿನ ಅಸಮಾಧಾನ, ಸಮತೋಲನ ಹಾಗೂ ನಾಯಕತ್ವ ಪ್ರಶ್ನೆಗಳ ಕುರಿತು ಮಹತ್ವದ ಮಾತುಕತೆ ನಡೆಯಲಿದೆಯೆಂಬ ಊಹಾಪೋಹ ರಾಜಕೀಯ ವಲಯದಲ್ಲಿ ಓಡಾಡುತ್ತಿದೆ.
ಇಂದು ಸಂಜೆ ಡಿಕೆಶಿ ನೇರವಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುವರು.
ಅದೇ ರೀತಿ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ, ಸುರ್ಜೆವಾಲರನ್ನು ಭೇಟಿ ಮಾಡುವ ಸಾಧ್ಯತೆ ಗಟ್ಟಿಯಾಗಿದೆ.
ಮರುಮರು ಡಿಕೆಶಿ ಹೇಳಿರುವ “ನಾಯಕತ್ವ ವಿಷಯದಲ್ಲಿ ಸ್ಪಷ್ಟತೆ ಬೇಕು” ಎಂಬ ಬೇಡಿಕೆ ಮತ್ತೊಮ್ಮೆ ಸಭೆಯ ಕೇಂದ್ರಬಿಂದುವಾಗಲಿದೆ ಎನ್ನುತ್ತಿದೆ ಪಕ್ಷ ಮೂಲಗಳು.
ಈಗಿನ ಪರಿಸ್ಥಿತಿಯಲ್ಲಿ ಇಬ್ಬರು ಪ್ರಮುಖ ನಾಯಕರು – CM ಮತ್ತು DCM – ನಡುವೆ ಸಮಾಲೋಚನೆ ಜಟಿಲವಾಗಿದೆ. ಡಿಕೆಶಿ ಮನವೊಲಿಸಿ, ಸಂಪುಟ ಪುನರ್‌ರಚನೆಗೆ ಹೈಕಮಾಂಡ್ ಹಸಿರು ನಿಶಾನೆ ನೀಡುತ್ತದೆಯೇ ಎಂಬ ಪ್ರಶ್ನೆ ಈಗ ರಾಜಕೀಯ ವಲಯದ ಹಾಟ್ ಟಾಪಿಕ್.

