ನವದೆಹಲಿ, ಏಪ್ರಿಲ್ 07: ದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಹತ್ವದ ಎಚ್ಚರಿಕೆ ನೀಡಿದೆ. ಏಪ್ರಿಲ್ 10ರಿಂದ ದೇಶಾದ್ಯಂತ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿರ್ಧರಿಸಿದೆ.
ಹೆದ್ದಾರಿಗಳಲ್ಲಿ ಸುಗಮ ಸಂಚಾರ ಮತ್ತು ಟೋಲ್ ಪ್ಲಾಜಾಗಳಲ್ಲಿ ಕಾಯುವ ಸಮಯವನ್ನು ಶೂನ್ಯಕ್ಕೆ ಇಳಿಸುವ ಉದ್ದೇಶದಿಂದ ಈ ಡಿಜಿಟಲೀಕರಣ ಕ್ರಮ ಕೈಗೊಳ್ಳಲಾಗಿದೆ. ಹೊಸ ನಿಯಮದ ಪ್ರಕಾರ, ಫಾಸ್ಟ್‌ಟ್ಯಾಗ್ (FASTag) ಹೊಂದಿರದ ವಾಹನಗಳಿಗೆ ಯುಪಿಐ (UPI) ಮೂಲಕ ಪಾವತಿಸಲು ಅವಕಾಶ ನೀಡಲಾಗುತ್ತದೆ. ಆದರೆ, ಯುಪಿಐ ಮೂಲಕ ಪಾವತಿ ಮಾಡುವವರಿಗೆ ಶೇ. 25ರಷ್ಟು ಹೆಚ್ಚುವರಿ ದಂಡ ವಿಧಿಸಲಾಗುತ್ತದೆ. ಉದಾಹರಣೆಗೆ, ₹100 ಟೋಲ್ ಶುಲ್ಕವಿದ್ದರೆ ₹125 ಪಾವತಿಸಬೇಕಾಗುತ್ತದೆ.
ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಪಾವತಿಸಲು ನಿರಾಕರಿಸುವ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿ ನಿಯಮ 14ರಡಿ ರಸ್ತೆಯ ಪ್ರವೇಶ ನಿರಾಕರಿಸಲಾಗುತ್ತದೆ. ಜೊತೆಗೆ ಇಂತಹ ವಾಹನಗಳಿಗೆ ಇ-ನೋಟಿಸ್ ಜಾರಿ ಮಾಡಲಾಗುತ್ತದೆ. ನೋಟಿಸ್ ಬಂದ 3 ದಿನಗಳೊಳಗೆ ಬಾಕಿ ಮೊತ್ತ ಪಾವತಿಸದಿದ್ದರೆ ದಂಡದ ಮೊತ್ತ ದುಪ್ಪಟ್ಟಾಗಲಿದೆ ಎಂದು ಸಚಿವಾಲಯ ತಿಳಿಸಿದೆ.
ಇನ್ನು ಮುಂದೆ ಸ್ಥಳೀಯ ನಿವಾಸಿಗಳು ಅಥವಾ ವಿನಾಯಿತಿ ಹೊಂದಿರುವವರು ಗುರುತಿನ ಚೀಟಿ ತೋರಿಸಿ ಟೋಲ್ ದಾಟಲು ಅವಕಾಶ ಇರುವುದಿಲ್ಲ. ಅಂತಹವರು ಕಡ್ಡಾಯವಾಗಿ ‘ಎಕ್ಸೆಂಪ್ಟೆಡ್ ಫಾಸ್ಟ್‌ಟ್ಯಾಗ್’ ಅಥವಾ ಡಿಜಿಟಲ್ ಪೋರ್ಟಲ್ ಮೂಲಕ ವಾರ್ಷಿಕ ಪಾಸ್ ಪಡೆಯಬೇಕಾಗಿದೆ.
ಏಪ್ರಿಲ್ 10ರ ಗಡುವು ಸಮೀಪಿಸುತ್ತಿರುವ ಹಿನ್ನೆಲೆ, ವಾಹನ ಸವಾರರು ತಮ್ಮ ಫಾಸ್ಟ್‌ಟ್ಯಾಗ್ ಕೆವೈಸಿ (KYC) ತಕ್ಷಣವೇ ಅಪ್‌ಡೇಟ್ ಮಾಡಿಕೊಳ್ಳಲು ಹಾಗೂ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇಟ್ಟುಕೊಳ್ಳಲು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆಯನ್ನೂ ಹಂತ ಹಂತವಾಗಿ ಜಾರಿಗೆ ತರಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ.

