ಮುಂಬೈ, ಮಾರ್ಚ್ 18: ಧುರಂಧರ್ 2 ಸಿನಿಮಾದ ಹೈಪ್ ದಿನೇದಿನೇ ಹೆಚ್ಚಾಗುತ್ತಿರುವ ನಡುವೆ, ಚಿತ್ರಕ್ಕೆ Central Board of Film Certification (CBFC) ಕತ್ತರಿ ಹಾಕಿದೆ. ನಿರ್ದೇಶಕ ಆದಿತ್ಯ ಧಾರ್ ಅವರ ಸಾರಥ್ಯದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ರಣವೀರ್ ಸಿಂಗ್, ಅರ್ಜುನ್ ರಾಮ್‌ಪಾಲ್, ಸಾರಾ ಅರ್ಜುನ್ ಹಾಗೂ ಆರ್. ಮಾಧವನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರದ ಪೇಯ್ಡ್ ಪ್ರಿವ್ಯೂಗಳು ಇಂದು (ಮಾರ್ಚ್ 18) ಆರಂಭವಾಗುವ ಮುನ್ನವೇ ಸೆನ್ಸಾರ್ ವರದಿ ಹೊರಬಿದ್ದಿದ್ದು, CBFC ‘ಎ’ (ವಯಸ್ಕರಿಗೆ ಮಾತ್ರ) ಸರ್ಟಿಫಿಕೇಟ್ ನೀಡಿದೆ. ಜೊತೆಗೆ, ಸಿನಿಮಾದಲ್ಲಿ ಒಟ್ಟು 21 ಬದಲಾವಣೆಗಳನ್ನು ಮಾಡುವಂತೆ ಸೂಚಿಸಿದೆ.
ಚಿತ್ರದಲ್ಲಿ ಅತಿಯಾದ ಹಿಂಸಾಚಾರದ ದೃಶ್ಯಗಳು ಇರುವುದರಿಂದ, ಪ್ರಮುಖವಾಗಿ ನಾಲ್ಕು ಭಯಾನಕ ದೃಶ್ಯಗಳ ಅವಧಿಯನ್ನು ಕಡಿತಗೊಳಿಸಲಾಗಿದೆ. ಕಣ್ಣುಗಳನ್ನು ಜಜ್ಜುವ, ತಲೆ ಕಡಿದು ಕಾಲಿನಿಂದ ಒದೆಯುವ, ಸಿಮೆಂಟ್ ಬ್ಲಾಕ್‌ನಿಂದ ತಲೆಗೆ ಹೊಡೆಯುವ ಹಾಗೂ ಸುತ್ತಿಗೆಯಿಂದ ತಲೆಗೆ ಬಡಿಯುವ ದೃಶ್ಯಗಳನ್ನು ಸಂಕ್ಷಿಪ್ತಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದಷ್ಟೇ ಅಲ್ಲದೆ, ಕೆಲವು ವಿಷಯಾಧಾರಿತ ತಿದ್ದುಪಡಿ ಸೂಚನೆಗಳನ್ನೂ ಮಂಡಳಿ ನೀಡಿದೆ. ಸಬ್ಟೈಟಲ್‌ನಲ್ಲಿ ನೀಡಿದ್ದ ನೋಟ್‌ಬ್ಯಾನ್ ದಿನಾಂಕಗಳನ್ನು ಸರಿಪಡಿಸಲಾಗಿದ್ದು, ‘ಲಾಹೋರ್’ ಎಂಬ ಹೆಸರನ್ನು ‘ದೆಹಲಿ’ ಎಂದು ಬದಲಾಯಿಸಲಾಗಿದೆ. ಪ್ರಧಾನ ಮಂತ್ರಿಯವರ ಉಲ್ಲೇಖ ಹಾಗೂ ಸುದ್ದಿ ತುಣುಕುಗಳ ಬಳಕೆಗೆ ಚಿತ್ರತಂಡ ಅಧಿಕೃತ ಅನುಮತಿ ಪತ್ರ ಸಲ್ಲಿಸಿದೆ.
ಸೆನ್ಸಾರ್ ಕಟ್‌ಗಳ ನಂತರ ಭಾರತದಲ್ಲಿ ಚಿತ್ರದ ಅವಧಿ 3 ಗಂಟೆ 49 ನಿಮಿಷ 36 ಸೆಕೆಂಡ್ ಆಗಿದ್ದು, ವಿದೇಶಿ ಆವೃತ್ತಿಯು ಸುಮಾರು 3 ಗಂಟೆ 55 ನಿಮಿಷಗಳಷ್ಟಿದೆ. ಅಂದರೆ, ಭಾರತೀಯ ಆವೃತ್ತಿ ಸುಮಾರು 6 ನಿಮಿಷ ಕಡಿಮೆ ಆಗಿದೆ.
ಈ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಎ ರೇಟಿಂಗ್ ನೀಡಿದ ಮೇಲೆ ದೃಶ್ಯಗಳನ್ನು ಕತ್ತರಿಸುವ ಅಗತ್ಯವೇನು?’ ಎಂದು ಸಿನಿಪ್ರಿಯರು ಪ್ರಶ್ನಿಸುತ್ತಿದ್ದಾರೆ. ಇನ್ನೂ ಕೆಲವರು, “ಸೆನ್ಸಾರ್ ಮಂಡಳಿ ಸಿನಿಮಾ ಎಡಿಟ್ ಮಾಡಲು ಅಲ್ಲ, ರೇಟಿಂಗ್ ನೀಡಲು ಮಾತ್ರ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

