ನವದೆಹಲಿ : ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಎಂಎಸ್‌ಪಿ ಹೆಚ್ಚಳಕ್ಕೆ ಒಪ್ಪಿಗೆ ನೀಡಲಾಗಿದೆ. 6 ರಾಬಿ ಅಂದರೆ ಹಿಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯನ್ನು ಕ್ವಿಂಟಾಲ್‌ಗೆ 130 ರೂ.ನಿಂದ 300 ರೂ.ವರೆಗೆ ಏರಿಕೆ ಮಾಡಿದೆ.
ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಈ ಮಾಹಿತಿ ನೀಡಿದ್ದಾರೆ.ಗೋಧಿ ಬೆಳೆಯ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಾಲ್‌ಗೆ 150 ರೂ. ಹೆಚ್ಚಿಸಲಾಗಿದೆ.ಈ ಮೂಲಕ ಎಂಎಸ್‌ಪಿಯನ್ನು 2,275 ರೂ.ನಿಂದ 2,425 ರೂ.ಗೆ ಏರಿಕೆ ಮಾಡಲಾಗಿದೆ. ಸಾಸಿವೆ ಬೆಂಬಲ ಬೆಲೆಯನ್ನು 300 ರೂ. ಏರಿಕೆ ಮಾಡಿ ಕ್ವಿಂಟಾಲ್‌ಗೆ 5,950 ರೂ.ಗೆ ಹೆಚ್ಚಿಸಲಾಗಿದೆ.
ಕಡಲೆಕಾಳಿನ ಎಂಎಸ್‌ಪಿಯನ್ನು 210 ರೂ. ಹೆಚ್ಚಿಸಲಾಗಿದ್ದು, ಕ್ವಿಂಟಾಲ್‌ಗೆ 5,650 ರೂ.ಗೆ ಮುಟ್ಟಿದೆ. ರೈತರಿಗೆ ಹಣಕಾಸಿನ ಬೆಂಬಲ ನೀಡುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಅದರಲ್ಲೂ ಮುಖ್ಯವಾಗಿ ಹಿಂಗಾರು ಬೆಳೆಗಳ ಅವಧಿಯಲ್ಲಿ ಕೃಷಿಕರ ಆದಾಯ ಹೆಚ್ಚಿಸಲು ಬೆಂಬಲ ಬೆಲೆ ಏರಿಕೆ ಮಾಡಲಾಗಿದೆ.
ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ (ಸಿಎಸಿಪಿ) ಬಿತ್ತನೆ ಹಂಗಾಮು ಮುಗಿಯುವ ಮೊದಲು 22 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಶಿಫಾರಸು ಮಾಡುತ್ತದೆ. ಮುಂಗಾರಿನಲ್ಲಿ 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಿದರೆ, 7 ಹಿಂಗಾರು ಬೆಳೆಗಳಿಗೆ ಎಂಎಸ್‌ಪಿಯ ನೀಡಲಾಗುತ್ತದೆ.