ಬೆಂಗಳೂರು,ಡಿಸೆಂಬರ್ 2 : ಎಂಎಲ್ ಎ ಹಾಗೂ ಎಂಎಲ್ ಸಿ ಆಗಿ ಸೇವೆ ಸಲ್ಲಿಸಿದ್ದ ಆರ್.ವಿ.ದೇವರಾಜ್ ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ಅವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಎಂಎಲ್ ಎ ಹಾಗೂ ಎಂಎಲ್ ಸಿ ಆಗಿ ಸೇವೆ ಸಲ್ಲಿಸಿದ್ದ ಆರ್.ವಿ.ದೇವರಾಜ್ ಅವರು ನಿಧನರಾಗಿದ್ದಾರೆ. ನಾಳೆಯೇ ಅವರ ಜನ್ಮದಿನವಾಗಿದ್ದರಿಂದ,ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿರುವುದು ಅತ್ಯಂತ ನೋವಿನ ಸಂಗತಿ. ದೇವರಾಜು ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಅವರ ಅಗಲಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವುಂಟಾಗಿದೆ. ಇತ್ತೀಚೆಗೆ ನನ್ನನ್ನು ಭೇಟಿಯಾಗಿದ್ದ ದೇವರಾಜುಅವರು ಕೆಲವು ವಿಚಾರಗಳ ಬಗ್ಗೆ ಚರ್ಚಿಸಿದ್ದರು. ದೇವರಾಜ್ ಅವರ ಆತ್ಮಕ್ಕೆ ಶಾಂತಿ ದೊರಕಲಿ ಹಾಗೂ ಅವರ ಕುಟುಂಬವರ್ಗ ಹಾಗೂ ಅಭಿಮಾನಿ ಬಳಗಕ್ಕೆ ಅವರ ಅಗಲಿಕೆಯ ದು:ಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ಸಿಎಲ್ ಪಿ ಸಭೆಯಲ್ಲಿ ಶಾಸಕರ ಭೇಟಿ
ಶಾಸಕರೊಂದಿಗೂ ಔತಣಕೂಟ ಏರ್ಪಡಿಸಿ ಒಗ್ಗಟ್ಟಿನ ಸೂತ್ರವನ್ನು ಪಠಿಸಲಾಗುವುದೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಸಿಎಲ್ ಪಿ ಸಭೆ ಸಂದರ್ಭದಲ್ಲಿ ಶಾಸಕರೊಂದಿಗೆ ಔತಣಕೂಟ ಏರ್ಪಡಿಸಲಾಗುವುದು ಎಂದರು.
ನನ್ನ ಮತ್ತು ಡಿಸಿಎಂ ಅವರ ಪಕ್ಷ ಮತ್ತು ಸಿದ್ಧಾಂತ ಒಂದೇ
ಸಿ ಎಂ ಮತ್ತು ಡಿಸಿಎಂ ಬಗ್ಗೆ ಬ್ರದರ್ಸ್ ಎಂಬ ಮಾತು ಮುನ್ನಲೆಗೆ ಬಂದಿರುವ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, ಒಂದೇ ಪಕ್ಷದಲ್ಲಿರುವ ನಾವು ಎಂದಿಗೂ ಬ್ರದರ್ಸ್. ಒಂದೇ ಪಕ್ಷ ಸಿದ್ದಾಂತವನ್ನು ಹೊಂದಿರುವ ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡುವ ಜೊತೆಗೆ 2028ರ ವಿಧಾನಸಭಾ ಚುನಾವಣೆಯನ್ನೂ ಸಹ ಒಟ್ಟಿಗೆ ಎದುರಿಸಿ, ರಾಜ್ಯದಲ್ಲಿ ಪುನ: ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದೇವೆ. ನಮ್ಮ ನಡುವೆ ಯಾವ ಭಿನ್ನಾಭಿಪ್ರಾಯವೂ ಇಲ್ಲ, ರಾಜ್ಯದ ಒಳಿತಿಗಾಗಿ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಪಕ್ಷ, ಅಧಿವೇಶನ, ರಾಜಕೀಯ ಚರ್ಚೆಗಳು ಹಾಗೂ ಎಂಎಲ್ ಸಿ ಸೀಟುಗಳು ಬಗ್ಗೆ ಚರ್ಚೆಯನ್ನು ನಡೆಸಲಾಗಿದೆ. ಬೆಳಗಾವಿ ಅಧಿವೇಶನದಲ್ಲಿ ವಿಪಕ್ಷಗಳು ಎತ್ತಬಹುದಾದ ವಿಚಾರಗಳನ್ನು ಸಮರ್ಥವಾಗಿ ಒಗ್ಗಟ್ಟಿನಿಂದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಎದುರಿಸಲಿದ್ದೇವೆ. ನಂತರ ಸರ್ವಪಕ್ಷ ಸಭೆಯನ್ನು ನಡೆಸುವ ಬಗ್ಗೆ ಚರ್ಚಿಸಲಾಗಿದ್ದು, ರಾಜ್ಯದ ಯೋಜನೆಗಳಿಗೆ ವೇಗ ನೀಡಲು ಎಲ್ಲ ಪಕ್ಷದ ಸಂಸದರ ಸಹಯೋಗವನ್ನು ಕೋರಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕಾಂಗ್ರೆಸ್ ನ ಶಾಸಕರೆಲ್ಲರೂ ಒಗ್ಗಟ್ಟಾಗಿದ್ದಾರೆ
ನಾಯಕತ್ವ ಬದಲಾವಣೆಯ ಬಗ್ಗೆ ಶಾಸಕರ ನಿಲುವುಗಳ ಬಗ್ಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ನ ಯಾವ ಶಾಸಕರಲ್ಲಿಯೂ ಬೇಧವಿಲ್ಲ. ಶಾಸಕರು ತಮ್ಮ ಅಭಿಪ್ರಾಯಗಳನ್ನು ನೀಡಿದ್ದಾರಷ್ಟೇ. ಕಾಂಗ್ರೆಸ್ ನ ಎಲ್ಲ ಶಾಸಕರೂ ಅಧಿವೇಶನದಲ್ಲಿ ಭಾಗವಹಿಸಿ, ವಿಪಕ್ಷಗಳನ್ನು ಒಗ್ಗಟ್ಟಿನಿಂದ ಎದುರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸಚಿವಸಂಪುಟ ಪುನರ್ರಚನೆ
ಸಚಿವಸಂಪುಟ ಪುನರ್ರಚನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಸಚಿವ ಸಂಪುಟ ಪುನರ್ರಚನೆ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸಬೇಕಾಗಿದೆ ಎಂದರು.

