ಬಿಹಾರ: ಆಟಿಕೆ ಎಂದು ಭಾವಿಸಿ ಒಂದು ವರ್ಷದ ಮಗು ಹಾವನ್ನು ಬಾಯಿಂದ ಕಚ್ಚಿ ಸಾಯಿಸಿದ ಘಟನೆ ಬಿಹಾರದ ಗಯಾದಲ್ಲಿ ನಡೆದಿದೆ. ಮನೆಯಲ್ಲಿ ಆಟವಾಡುತ್ತಿದ್ದ ಮಗು ಬಂದಿದ್ದಹಾವನ್ನು ಆಟಿಕೆಯಾಗಿ ತೆಗೆದುಕೊಂಡು ಬಾಯಿಗೆ ಹಾಕಿಕೊಂಡು ಜಗಿದು ಕೊಂದು ಹಾಕಿದೆ.
ಬಿಹಾರದ ಗಯಾದ ಫತೇಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಜಮುಹರ್ ಗ್ರಾಮದಲ್ಲಿ ಒಂದು ವರ್ಷದ ಮಗು ತನ್ನ ಮನೆಯ ಟೆರೇಸ್ ಮೇಲೆ ಆಟವಾಡುತ್ತಿತ್ತು. ಅಷ್ಟರಲ್ಲಿ ಮೂರು ಅಡಿ ಉದ್ದದ ಹಾವೊಂದು ಬಂದಿತು. ಹಾವನ್ನು ಆಟಿಕೆ ಎಂದು ಪರಿಗಣಿಸಿ ಅದನ್ನು ಹಿಡಿದುಕೊಂಡು ಸ್ವಲ್ಪ ಹೊತ್ತು ಆಟವಾಡಿದೆ. ಆ ಬಳಿಕ ಮಗು ಹಾವಿನ ಮಧ್ಯ ಭಾಗವನ್ನು ಬಾಯಿಗೆ ಹಾಕಿಕೊಂಡು ಜಗಿಯತೊಡಗಿತು. ಮಗುವಿನ ಬಾಯಿಯಲ್ಲಿ ಹಲ್ಲುಗಳು ಬಂದಿದ್ದರಿಂದ ಹಾವು ಸಾವನ್ನಪ್ಪಿದೆ. ಅಷ್ಟರಲ್ಲಿ ಮಗುವಿನ ತಾಯಿ ಅಲ್ಲಿಗೆ ಬಂದು ಆ ದೃಶ್ಯ ನೋಡಿ ಬಿದ್ದಿದ್ದಾಳೆ.
ತಕ್ಷಣವೇ ಸತ್ತ ಹಾವನ್ನು ನೋಡಿದ ಅವರು ಅದನ್ನು ತೆಗೆದು ಮಗುವನ್ನು ಎತ್ತಿಕೊಂಡು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಆಸ್ಪತ್ರೆಯ ಅಧಿಕಾರಿಗಳು ಮಗುವಿಗೆ ಎಲ್ಲಾ ರೀತಿಯ ಪರೀಕ್ಷೆಗಳನ್ನು ನಡೆಸಿ ಮಗು ಸಂಪೂರ್ಣವಾಗಿ ಆರೋಗ್ಯವಾಗಿದ್ದು, ಯಾವುದೇ ಅಪಾಯವಾಗಿಲ್ಲ ಎಂದು ಹೇಳಿದ್ದಾರೆ.
ಮಗು ಕಚ್ಚಿದ ಕಾರಣ ಹಾವು ಸಾವನ್ನಪ್ಪಿದ್ದು, ಸತ್ತ ಹಾವು ವಿಷಕಾರಿಯಲ್ಲದ ಕಾರಣ ಯಾವುದೇ ಅಪಾಯವಿಲ್ಲ ಎಂದು ತಿಳಿಸಿದರು. ಇದನ್ನು ಕೇಳಿದ ಪೋಷಕರು ನಿಟ್ಟುಸಿರುಬಿಟ್ಟಿದ್ದಾರೆ. ಈ ಕುರಿತ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

