ಹ್ಯಾಂಗ್ಝೌ , ಆಗಸ್ಟ್ 8: ಚೀನಾದ ವಾಯುವ್ಯ ಭಾಗದ ಯುಝಾಂಗ್ ಕೌಂಟಿಯಲ್ಲಿ ದಿಢೀರ್ ಪ್ರವಾಹ ಅಪ್ಪಳಿಸಿ 10 ಜನರು ಸಾವನ್ನಪ್ಪಿದ್ದಾರೆ ಮತ್ತು 33 ಜನರು ಕಾಣೆಯಾಗಿದ್ದಾರೆ ಎಂದು ಚೀನಾದ ಮಾಧ್ಯಮ ವರದಿ ಮಾಡಿದೆ. ಚೀನಾದಲ್ಲಿ ಗುರುವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಲನ್ಝೌ ನಗರದ ಸಮೀಪವಿರುವ ಪರ್ವತ ಪ್ರದೇಶಗಳಲ್ಲಿ ದಿಢೀರ್ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದೆ ಎನ್ನಲಾಗಿದೆ.
ಕ್ಸಿಂಗ್ಲಾಂಗ್ ಪರ್ವತ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ವಿದ್ಯುತ್ ಮತ್ತು ದೂರಸಂಪರ್ಕ ಸೇವೆಗಳು ಸ್ಥಗಿತಗೊಂಡವು. ಇದರಿಂದಾಗಿ 4 ಹಳ್ಳಿಗಳಲ್ಲಿ 4,000ಕ್ಕೂ ಹೆಚ್ಚು ಜನರು ಸಿಲುಕಿಕೊಂಡರು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಈ ಪ್ರದೇಶದಲ್ಲಿ ಸಂಪೂರ್ಣ ರಕ್ಷಣಾ ಮತ್ತು ಪ್ರವಾಹ ತಡೆಗಟ್ಟುವ ಪ್ರಯತ್ನಗಳನ್ನು ಚುರುಕುಗೊಳಿಸಲು ಆದೇಶಿಸಿದ್ದಾರೆ.
ಚೀನಾದ ಇತರ ಭಾಗಗಳು ಈ ದಶಕದಲ್ಲಿಯೇ ಅತಿ ಹೆಚ್ಚಿನ ಮಳೆಯನ್ನು ಎದುರಿಸುತ್ತಿರುವಾಗ ಗನ್ಸು ಪ್ರದೇಶದಲ್ಲಿ ನೈಸರ್ಗಿಕ ವಿಕೋಪ ಸಂಭವಿಸಿದೆ. 19ನೇ ಶತಮಾನದ ನಂತರದ ಆಗಸ್ಟ್‌ನಲ್ಲಿ ಬಿದ್ದ ಅತ್ಯಂತ ಕೆಟ್ಟ ಮಳೆ ಇದೆ ಎನ್ನಲಾಗಿದೆ.
ಭಾರೀ ಪ್ರವಾಹದಿಂದಾಗಿ ರಸ್ತೆಗಳು ಹಾನಿಗೊಳಗಾಗಿವೆ, ಮರಗಳು ಉರುಳಿವೆ ಮತ್ತು ಕೆಲವು ಪ್ರದೇಶಗಳಲ್ಲಿ ಭೂಮಿಯೊಳಗಿನ ಕೇಬಲ್‌ಗಳು ಸಹ ತೆರೆದಿವೆ ಎಂದು ವರದಿಗಳು ತಿಳಿಸಿವೆ. ಭಾರೀ ಮಳೆಯಿಂದಾಗಿ ವಿಮಾನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಗುವಾಂಗ್‌ಝೌನ ಬೈಯುನ್ ವಿಮಾನ ನಿಲ್ದಾಣವು ಬುಧವಾರ 360ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದೆ.

