ಬೆಂಗಳೂರು: ರಾಜ್ಯದಲ್ಲಿ ದಿನೇದಿನೇ ಹೆಚ್ಚುತ್ತಿರುವ ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕುವಲ್ಲಿ ಸಿಐಡಿ ಸೈಬರ್ ಕ್ರೈಂ ವಿಭಾಗಕ್ಕೆ ಮಹತ್ವದ ಯಶಸ್ಸು ಲಭಿಸಿದೆ. ಮ್ಯೂಲ್ ಅಕೌಂಟ್‌ಗಳ ಮೂಲಕ ನಡೆಯುತ್ತಿದ್ದ ಭಾರೀ ಸೈಬರ್ ವಂಚನೆ ದಂಧೆಯನ್ನು ಸಿಐಡಿ ಪೊಲೀಸರು ಭೇದಿಸಿ, ಈ ಪ್ರಕರಣದ ಪ್ರಮುಖ 13 ಮಾಸ್ಟರ್‌ಮೈಂಡ್‌ಗಳನ್ನು ಬಂಧಿಸಿದ್ದಾರೆ.
ರಾಜ್ಯಾದ್ಯಂತ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ ಸಿಐಡಿ ತಂಡ, ವಂಚನೆಗೆ ಬಳಸಲಾಗುತ್ತಿದ್ದ 40,000ಕ್ಕೂ ಅಧಿಕ ಮ್ಯೂಲ್ ಅಕೌಂಟ್‌ಗಳನ್ನು ಪತ್ತೆಹಚ್ಚಿದೆ. ತನಿಖೆ ವೇಳೆ ಅಮಾಯಕರ ಬ್ಯಾಂಕ್ ಖಾತೆಗಳು, ಎಟಿಎಂ ಕಾರ್ಡ್‌ಗಳು ಹಾಗೂ ಖಾತೆ ವಿವರಗಳನ್ನು ಹಣದ ಲಾಭಕ್ಕಾಗಿ ಸಂಗ್ರಹಿಸಿ ಸೈಬರ್ ವಂಚಕರಿಗೆ ನೀಡಲಾಗುತ್ತಿದ್ದುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಈ ಮ್ಯೂಲ್ ಅಕೌಂಟ್‌ಗಳ ಮೂಲಕ ಆನ್‌ಲೈನ್ ವಂಚನೆ ನಡೆಸಿ, ಹಣ ವರ್ಗಾವಣೆ ಮಾಡಿ ಎಟಿಎಂ ಮೂಲಕ ನಗದು ವಿತ್‌ಡ್ರಾ ಮಾಡಲಾಗುತ್ತಿತ್ತು. ಖಾತೆ ವಿವರಗಳನ್ನು ಒದಗಿಸಿದ ಹಲವರಿಗೆ ವಂಚನೆಯ ಬಗ್ಗೆ ಯಾವುದೇ ಅರಿವು ಇರಲಿಲ್ಲ ಎಂದು ಸಿಐಡಿ ತಿಳಿಸಿದೆ.
ದಾಳಿಯ ಸಂದರ್ಭದಲ್ಲಿ ಸುಮಾರು 42,000 ಮ್ಯೂಲ್ ಅಕೌಂಟ್‌ಗಳು ಸಕ್ರಿಯವಾಗಿ ಬಳಕೆಯಲ್ಲಿದ್ದುದನ್ನು ಪತ್ತೆ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

