ಮಂಗಳೂರು: ಸಿಎಂ ಬದಲಾವಣೆ ಚರ್ಚೆ ವಿಚಾರ ಅವಶ್ಯಕತೆ ಇಲ್ಲದ ವಿಚಾರ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾರೆ. ಅವರೇ ಮುಂದುವರಿಯುತ್ತಾರೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಇನ್ನೊಬ್ಬರು ಮುಖ್ಯಮಂತ್ರಿ ಆಗಬೇಕೆಂಬ ಕಾರಣ, ಸನ್ನಿವೇಶವೇ ಇಲ್ಲ. ನೀವು ಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ನೀವು ನನ್ನನ್ನು ಕೇಳಬಹುದು. ಆಸೆ ಇದೆಯೋ ಇಲ್ಲವೇ ಎಂಬುದು ಬೇರೆ ಪ್ರಶ್ನೆ. ಆದರೆ ಹೈಕಮಾಂಡ್ ತೀರ್ಮಾನ ಏನು ಇರುತ್ತೋ ಅದಕ್ಕೆ ಬದ್ಧವಾಗಿ ಇರುತ್ತೇವೆ. ನಮ್ಮದು ಶಿಸ್ತಿನ ಪಕ್ಷ. ವರಿಷ್ಠರ ತೀರ್ಮಾನ ಏನು ಇರುತ್ತೋ ಹಾಗೆ ಮಾಡ್ತೀವಿ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ ಮುಖ್ಯಮಂತ್ರಿ ಬದಲಾವಣೆ ಸನ್ನಿವೇಶ ಸದ್ಯದ ಪರಿಸ್ಥಿತಿಯಲ್ಲಿ ಇಲ್ಲ ಎಂದರು.
ಸಚಿವ ಸಂಪುಟ ವಿಸ್ತರಣೆ ಆಗೋವಾಗ ಆಗುತ್ತದೆ. ಯಾವಾಗ, ಏನು ಆಗಬೇಕೆಂದು ಮುಖ್ಯಮಂತ್ರಿಗಳು, ರಾಷ್ಟ್ರದ, ರಾಜ್ಯದ ಅಧ್ಯಕ್ಷರು, ಉಸ್ತುವಾರಿಗಳು ತೀರ್ಮಾನ ಮಾಡುತ್ತಾರೆ. ಪ್ರಕ್ರಿಯೆಗಳು ಶುರು ಆದಾಗ ನಿಮಗೂ ಗೊತ್ತಾಗುತ್ತದೆ. ಈಗ ಪ್ರಕ್ರಿಯೆ ಪ್ರಾರಂಭ ಆಗಿಲ್ಲ ಅಲ್ವಾ. ಕೇಳುವವರು ಕೇಳುತ್ತಾರೆ. ಹೇಳುವವರು ಹೇಳ್ತಾರೆ. ನೀವು ಮಂತ್ರಿ ಆಗ್ತೀರಾ ಎಂದು ಕೇಳಿದ್ರೆ ಹೌದು ನನಗೂ ಅವಕಾಶ ಇದೆ ಎಂದು ಹೇಳ್ತಾರೆ. ನನ್ನನ್ನು ಮಂತ್ರಿ ಸ್ಥಾನದಿಂದ ತೆಗೆದ್ರೆ ಏನು ಮಾಡುತ್ತೇರೆಂದು ನೀವು ಕೇಳಬಹುದು. ತೆಗೆದ್ರೆ ಒಪ್ಪಿಕೊಳ್ಳುತ್ತೇವೆ ನಾವು. ಹಿಂದೆಯೂ ಮೂರು ವರ್ಷ ಮಂತ್ರಿ ಆಗಿದ್ದೆ. ಪಕ್ಷಕ್ಕೆ ಕೆಲಸ ಮಾಡ್ತೇನೆ ಬೇರೆಯವರನ್ನು ಮಾಡಿದ್ದೀರೆಂದು ನಾನೇ ಹೇಳಿದ್ದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಆರ್‌ಎಸ್ಎಸ್ ಪಂಥ ಸಂಚಲನಕ್ಕೆ ವಿರೋಧ ವಿಚಾರ ಮಾತನಾಡಿ, ಆರ್‌ಎಸ್ಎಸ್ ಇರಬಹುದು ಇನ್ನೊಂದು ಸಂಸ್ಥೆಯೆ ಇರಬಹುದು ಕಾನೂನಿಗಿಂತ ಯಾವುದೂ ಮೇಲಲ್ಲ. ದೇಶದ ಕಾನೂನಿನ ಅಡಿಯೇ ಅವರು ಸಹ ಕೆಲಸ ಮಾಡಬೇಕು. ನಾವು ಯಾವುದೇ ಸಂಘಟನೆಗೂ ಸಪೋರ್ಟ್ ಮಾಡ್ತಿಲ್ಲ. ಎಸ್‌ಡಿಪಿಐನವರು ನಾಳೆ ಕಾರ್ಯಕ್ರಮ ಮಾಡುತ್ತಾರೆ ಅಂದರೆ ಅನುಮತಿ ಪಡೆದೆ ಮಾಡಬೇಕು. ಆರ್‌ಎಸ್ಎಸ್ ಬಿಜೆಪಿಯೊಂದಿಗೆ ಇರುವ ರಾಜಕೀಯ ಸಂಘಟನೆ. ರಾಜಕಿಯೇತರ ಸಂಘಟನೆ ಆದ್ರೆ ಅದು ಬೇರೆ ರೀತಿ. ಇದೊಂದು ಕಮ್ಯೂನಲ್ ಸಂಘಟನೆ ಎಂದರು.
ರಾಜಕೀಯ ಸಂಘಟನೆ ಆಗಿರುವುದರಿಂದ ಸಹಜವಾಗಿ ಅನುಮಾನ ಬಂದೇ ಬರುತ್ತೆ.ಯಾಕೆ ಮಾಡ್ತಿದ್ದಾರೆ, ಉದ್ದೇಶವೇನು?. ಆರ್‌ಎಸ್‌ಎಸ್‌ನಲ್ಲಿ ರಾಜಕೀಯ ಇಲ್ಲದೆ ಹೋಗಿದ್ರೆ ಈ ಸಮಸ್ಯೆ ಬರುತ್ತಿ ಇರಲಿಲ್ಲ. ಆರ್‌ಎಸ್ಎಸ್ ಇತಿಹಾಸ ಎಲ್ಲರಿಗೂ ಗೊತ್ತಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

