ಬೆಂಗಳೂರು, ಮಾ.6: ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಸಿಹಿ ಸುದ್ದಿ ನೀಡಿದ್ದಾರೆ. ದಾಖಲೆಯ 17ನೇ ಬಜೆಟ್ ಮಂಡನೆ ಮಾಡಿದ ಅವರು, ರಾಜ್ಯದ ವಿವಿಧ ಪ್ರಮುಖ ಇಲಾಖೆಗಳಲ್ಲಿ ಖಾಲಿ ಇರುವ 56,432 ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಘೋಷಿಸಿದರು.
ಇದರ ಜೊತೆಗೆ, ನೇಮಕಾತಿ ಪ್ರಕ್ರಿಯೆಗಳು ನ್ಯಾಯಾಲಯದ ಪ್ರಕರಣಗಳಿಂದ ವಿಳಂಬವಾಗಿದ್ದ ಹಿನ್ನೆಲೆ ಉದ್ಯೋಗ ನೇಮಕಾತಿಗಳ ವಯೋಮಿತಿಯಲ್ಲಿ ಒಂದು ಬಾರಿಗೆ 5 ವರ್ಷಗಳ ಸಡಿಲಿಕೆ ನೀಡಲಾಗುತ್ತದೆ ಎಂದು 2026–27ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ತಿಳಿಸಿದ್ದಾರೆ.
ಇತ್ತೀಚೆಗೆ ವಿದ್ಯಾನಗರಿ ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಮತ್ತು ನಿರುದ್ಯೋಗಿ ಯುವಕರು ಬೃಹತ್ ಪ್ರತಿಭಟನೆ ನಡೆಸಿ, ನೇಮಕಾತಿ ಪ್ರಕ್ರಿಯೆ ತಕ್ಷಣ ಆರಂಭಿಸಬೇಕು ಎಂದು ಆಗ್ರಹಿಸಿದ್ದರು. ಓದಿದ್ದರೂ ನೋಟಿಫಿಕೇಶನ್ ಹೊರಬರದೆ ವಯಸ್ಸು ಮೀರಿಬಿಡುತ್ತಿದೆ ಎಂದು ಯುವಕರು ಸರ್ಕಾರದ ಗಮನ ಸೆಳೆದಿದ್ದರು.
ಧಾರವಾಡದ ಯುವಕರ ಆಕ್ರೋಶ ಕೊನೆಗೂ ವಿಧಾನಸೌಧದ ಮೆಟ್ಟಿಲೇರಿದ್ದು, ಅವರ ಧ್ವನಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬೃಹತ್ ನೇಮಕಾತಿಗೆ ಹಸಿರು ನಿಶಾನೆ ತೋರಿದ್ದಾರೆ. ಬೆಂಗಳೂರು, ಧಾರವಾಡ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಪಿಜಿ ಪೂರ್ಣಗೊಳಿಸಿ, ಕೋಚಿಂಗ್‌ಗಳಿಗೆ ಸಾವಿರಾರು ರೂಪಾಯಿ ವೆಚ್ಚ ಮಾಡಿ ಹಗಲಿರುಳು ಓದುತ್ತಿರುವ ಲಕ್ಷಾಂತರ ಯುವಕರಿಗೆ ಈ ಘೋಷಣೆ ದೊಡ್ಡ ಉತ್ತೇಜನ ನೀಡಿದೆ.
ಸದ್ಯ ಬಜೆಟ್‌ನಲ್ಲಿ ಒಟ್ಟು 56 ಸಾವಿರಕ್ಕೂ ಹೆಚ್ಚು ಹುದ್ದೆಗಳ ಭರ್ತಿ ಮಾಡುವುದಾಗಿ ಘೋಷಣೆ ಮಾಡಲಾಗಿದ್ದರೂ, ಯಾವ ಇಲಾಖೆಗಳಲ್ಲಿ ಎಷ್ಟು ಹುದ್ದೆಗಳು ಎಂಬ ವಿವರ ಇನ್ನೂ ಅಧಿಕೃತವಾಗಿ ಪ್ರಕಟವಾಗಬೇಕಿದೆ. ಆದರೆ ಮೂಲಗಳ ಪ್ರಕಾರ ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ (ಶಿಕ್ಷಕರ ನೇಮಕಾತಿ), ಆರೋಗ್ಯ, ಕಂದಾಯ ಸೇರಿದಂತೆ ಹಲವು ಇಲಾಖೆಗಳಲ್ಲಿ ದೊಡ್ಡ ಮಟ್ಟದ ನೇಮಕಾತಿ ನಡೆಯುವ ಸಾಧ್ಯತೆ ಇದೆ.

