ಬೆಂಗಳೂರು : ನಟ ಶಿವರಾಜ್ ಕುಮಾರ್ ಕ್ಯಾನ್ಸರ್ನ ಶಸ್ತ್ರ ಚಿಕಿತ್ಸೆಗೆ ಎಂದು ಕಳೆದ ತಿಂಗಳು ಬೆಂಗಳೂರಿನಿಂದ ಅಮೇರಿಕಾಗೆ ಪ್ರಯಾಣಿಸಿದ್ದರು. ಅಮೇರಿಕಾದ ಮಿಯಾಮಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಶಿವಣ್ಣಗೆ ಶಸ್ತ್ರ ಚಿಕಿತ್ಸೆ ನಡೆದಿತ್ತು. ಇದೀಗ ಶಸ್ತ್ರ ಚಿಕಿತ್ಸೆ ಸಫಲಗೊಂಡು ನಿನ್ನೆ (ಜನವರಿ.26) ಶಿವಣ್ಣ ತಾಯ್ನಾಡಿಗೆ ಮರಳಿದ್ದರು. ಶಿವಣ್ಣನನ್ನು ಅವರ ಅಭಿಮಾನಿಗಳು ಬಹಳ ಸಂಭ್ರಮದಿಂದ ಬರಮಾಡಿಕೊಂಡಿದ್ದರು.
ಇಂದು ನಟ ಶಿವರಾಜ್ ಕುಮಾರ್ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದು. ಹ್ಯಾಟ್ರಿಕ್ ಹೀರೋ ಆರೋಗ್ಯ ವಿಚಾರಿಸಿದ್ದಾರೆ. ಭೇಟಿ ನೀಡಿದ್ದ ಪೋಟೊಗಳನ್ನು ಸಿಎಂ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅನಾರೋಗ್ಯ ನಿಮಿತ್ತ ವಿದೇಶದಲ್ಲಿ ಶಸ್ತ್ರಚಿಕಿತ್ಸೆಗೆ ಪಡೆದು ಗುಣಮುಖರಾಗಿ ಬಂದಿರುವ ಚಿತ್ರರಂಗದ ಖ್ಯಾತ ನಟ, ಆತ್ಮೀಯರು ಆದ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿ, ಆರೋಗ್ಯ ವಿಚಾರಿಸಿದೆ. ಶಿವರಾಜ್ ಕುಮಾರ್ ಅವರು ಮತ್ತೆ ಹಿಂದಿನಂತೆ ಕ್ರಿಯಾಶೀಲರಾಗಿರುವುದು ಕಂಡು ಖುಷಿಯಾಯಿತು.
ಅಭಿಮಾನಿಗಳ ಹರಕೆ – ಹಾರೈಕೆ, ಆತ್ಮಬಲದಿಂದ ಅನಾರೋಗ್ಯವನ್ನು ಗೆದ್ದು ಬಂದಿರುವ ಶಿವರಾಜ್ ಕುಮಾರ್ ಅವರ ಮುಂದಿನ ಜೀವನ ಸುಖ – ಶಾಂತಿಯಿಂದ ಕೂಡಿರಲಿ ಎಂದು ಹಾರೈಸುತ್ತೇನೆ.ಎಂದು ಬರೆದುಕೊಂಡಿದ್ದಾರೆ.

